ತೊಗರಿ, ಕಡಲೆ ಬೆಳೆಗಳಲ್ಲಿ ಕೀಟ, ರೋಗ ನಿರ್ವಹಣೆಗಾಗಿ ಕ್ಷಿಪ್ರ ಸಂಚಾರ ಸಮೀಕ್ಷೆ

ಬೀದರ:ನ.8: ತೊಗರಿ, ಕಡಲೆ ಮತ್ತು ಇತರೆ ಹಿಂಗಾರು ಬೆಳೆಗಳಿಗೆ ಬಾಧಿಸುವ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಕೃಷಿ ವಿಜ್ಞಾನ ಕೇಂದ್ರ ಬೀದರ ಹಾಗೂ ಕೃಷಿ ಇಲಾಖೆ ಬೀದರ ಇವರಿಂದ ಜಂಟಿಯಾಗಿ ಕ್ಷಿಪ್ರ ಸಂಚಾರ ಸಮೀಕ್ಷೆ ನಡೆಯುತ್ತಿದೆ.
ಬೀದರ ತಾಲೂಕಿನ ಮನ್ನಳ್ಳಿ ಗ್ರಾಮದ ರೈತರ ಹೊಲದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಸುನೀಲಕುಮಾರ ಎನ್ ಎಮ್ ಹಾಗೂ ಡಾ. ಅಕ್ಷಯಕುಮಾರ, ಡಾ.ಜ್ಞಾನದೇವ ಬುಳ್ಳಾ ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಮಾರ್ತಂಡ ಎಮ್ ಅವರು ಸಮೀಕ್ಷೆ ನಡೆಸಿದರು.
ಬೀದರ, ಭಾಲ್ಕಿ, ಔರಾದ, ಹುಮನಾಬಾದ, ಬಸವಕಲ್ಯಾಣ ತಾಲೂಕಿನ ಅನೇಕ ಗ್ರಾಮಗಳ ರೈತರ ಹೊಲದಲ್ಲಿ ತೊಗರಿ ಬೆಳೆಯು ಜಮೀನಿನಲ್ಲಿ ತೇವಾಂಶವಿದ್ದು, ಅತೀಯಾದ ಆರ್ಧತೆಯಿಂದ ಮತ್ತು ಎಲೆ ಚುಕ್ಕೆ ರೋಗ ಅನೇಕ ಕಡೆ ಕಂಡು ಬಂದಿದೆ. ಬೇಗ ಮಾಗುವ ತೊಗರಿ ತಳಿಯು ಹೂವಾಡುವ ಹಂತದಲ್ಲಿದ್ದು ಹಸಿರು ಕಾಯಿ ಕೊರಕದ ಬಾಧೆಯು ಆರ್ಥಿಕ ನಷ್ಟ ರೇಖೆಯನ್ನು ತಲುಪಿರುವದಿಲ್ಲ.
ಜಿಲ್ಲೆಯಾದ್ಯಂತ ತೊಗರಿಯು ಹೂವಾಡುವ ಆರಂಭಿಕ ಹಂತದಲ್ಲಿದೆ. ಕಳೆದ ವಾರದಿಂದ ಜಿಲ್ಲೆಯಲ್ಲಿ ಹಗಲಿನ ಹಾಗೂ ರಾತ್ರಿ ತಾಪಮಾನ ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣವಿದೆ. ಕಳೆದ 3 ದಿನಗಳಿಂದ ಮುಂಜಾನೆ ಮತ್ತು ಸಾಯಂಕಾಲದ ವಾತಾವರಣ ತಂಪಾಗಿದ್ದು ಹಾಗೂ ಮಂಜಿನಿಂದ ಕೂಡಿದೆ. ಇದು ತೊಗರಿಯ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದು ತೊಗರಿಯ ಮೊಗ್ಗು ಕೊಳೆಯುವಂತೆ ಮಾಡುತ್ತದೆ ಹಾಗೂ ಎಲೆಚುಕ್ಕೆ ರೋಗ ಬಾಧೆ ಉಂಟಾಗಲು ಈ ವಾತಾವರಣ ಪೂರಕವಾಗಿದೆ. ಸಾಮಾನ್ಯವಾಗಿ ಸರ್ಕೊಸ್ಪೊರಾ ಎಲೆ ಚುಕ್ಕೆ ರೋಗ ಎಂದು ಕರೆಯಲ್ಪಡುವ ಈ ರೋಗವು ಝಾಂಥೊಮೊನಾಸ್ ಕ್ಯಾಂಪೆಸ್ಟ್ರಿಸ್ ತಳಿ ಕ್ಯಾಜನಿ ಎನ್ನುವ ದುಂಡಾಣುವಿನಿಂದ ಉಂಟಾಗುತ್ತದೆ.
ಸರ್ಕೊಸ್ಪೊರಾ ಎಲೆ ಚುಕ್ಕೆ ರೋಗ ಕಂಡು ಬಂದಿದೆ. ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡು ಬರುತ್ತವೆ. ನಂತರ ಈ ಚುಕ್ಕೆಗಳು ಸಂಖ್ಯೆ ಮತ್ತು ಗಾತ್ರದಲ್ಲಿ ಬೆಳೆದು ಒಂದನ್ನೊಂದು ಕೂಡಿಕೊಂಡು ಎಲೆಯ ಬಹು ಭಾಗವನ್ನು ಅವರಿಸುವುದು. ರೋಗ ತೀವ್ರವಾದಂತೆ ಎಲೆಗಳೆಲ್ಲಾ ಉದುರಿ ಹೋಗಿ ಗಿಡ ಬೋಳಾಗಿ ಕಾಣುತ್ತವೆ. ಸಾಮಾನ್ಯವಾಗಿ ಹಳೆಯ ಎಲೆಗಳ ಮೇಲೆ ರೋಗದ ತೀವ್ರತೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದು ತಂಪಾದ ವಾತಾವರಣದಲ್ಲಿ ಎಳೆಯ ಎಲೆಗಳು ಹಾಗೂ ಹೂಹಳು ಸಹ ರೋಗಕ್ಕೆ ತುತ್ತಾಗಿ ಗಿಡದಿಂದ ಉದುರುತ್ತವೆ.
ಸರ್ಕೊಸ್ಪೊರಾ ಎಲೆ ಚುಕ್ಕೆ ರೋಗ ಹಾಗೂ ಹೂ ಉದುರುವುದು ಕಂಡು ಬಂದಲ್ಲಿ ನಿರ್ವಹಣೆಗಾಗಿ ಕಾರ್ಬನ್‍ಡೈಜಿಮ್ 300 ಗ್ರಾಂ. ಅಥವಾ ಹೆಕ್ಸಾಕೊನೊಝೊಲ್ 300 ಮಿ. ಲೀ ಜೊತೆಗೆ 2 ಕಿ.ಗ್ರಾಂ. ಪಲ್ಸ್ ಮ್ಯಾಜಿಕ್ ಪ್ರತಿ ಎಕೆರೆಗ ಬೆರೆಸಿ ಸಿಂಪರಿಸಬೇಕು.
ಸಮೀಕ್ಷೆಗಾಗಿ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಹಾಗು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳನ್ನೊಳಗೊಂಡು 2 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ರತಿ ಮಂಗಳವಾರದಂದು ಜಿಲ್ಲೆಯ 5 ತಾಲೂಕುಗಳಲ್ಲಿ ತೊಗರಿ, ಕಡಲೆ ಮತ್ತು ಇತರೆ ಹಿಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆ ನಡೆಸುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ಅಧಿಕಾರಿಗಳನ್ನು ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ಮಾಡಿದ್ದಾರೆ.