ತೊಗರಿಬೆಳೆಗೆ ಹುಳುಬಾಧೆ; ಕೃಷಿ ಅಧಿಕಾರಿಗಳ ವೀಕ್ಷಣೆ

ಜಗಳೂರು.ಸೆ.೯; ತಾಲೂಕಿನ ಕೃಷಿ ಇಲಾಖೆ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯ ಗುಚ್ಚಗ್ರಾಮ ಹಿರೇ ಬನ್ನಿಹಟ್ಟಿಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ತೊಗರಿ ಬೆಳೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಮಣ್ಣು ವಿಜ್ಞಾನಿಗಳಾದ ಎಚ್.ಎಮ್ ಸಣ್ಣ ಗೌಡರವರು ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸಲು  ತೊಗರಿಯಲ್ಲಿ ಗೂಡು ಮಾರು ಹುಳುವಿನ ಬಾಧೆ  ವೀಕ್ಷಣೆ ಮಾಡಿದರು ನಂತರ ಮಾತನಾಡಿದ ಅವರು ರೈತಬಾಂಧವರು ತಕ್ಷಣ ಪ್ರಫೆನೋಫಾಸ್ 2.5ml ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಸಿಂಪರಣೆ ಮಾಡುವುದು ಸೂಕ್ತ ಎಂದರು. ತೊಗರಿ ಬೇಳೆ ಐವತ್ತರಿಂದ ಅರವತ್ತು ದಿವಸಗಳು ಆದನಂತರ ಕುಡಿ ಚಿವುಟುವುದು ರಿಂದ ಅರೆ ಕೊಂಬುಗಳು ಜಾಸ್ತಿಯಾಗಿ ಇಳುವರಿ ಹೆಚ್ಚುತ್ತದೆ ಎಂದರು.ನಂತರ ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ್ ರವರು ಮಾಹಿತಿಯನ್ನು ಒದಗಿಸಿದರು. ಕುಡಿ ಚಿವುಟುವ ಯಂತ್ರದ ಬಳಕೆಯ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ಕೇಂದ್ರದ ವಿಸ್ತರಣ ತಜ್ಞರಾದ ರಘುರಾಜ್  ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತಿ ಸದಸ್ಯರಾದ ಗುರುಮೂರ್ತಿ ಹಾಗೂ ಆತ್ಮ ಯೋಜನೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ರೇಣುಕುಮಾರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ರೇಖಾ, ಸೇರಿದಂತೆ ಗ್ರಾಮದ ರೈತರು  ಪಾಲ್ಗೊಂಡಿದ್ದರು.