ತೊಗರಿಗೆ ಕ್ವಿಂಟಲ್‍ಗೆ ರೂ. 7,500 ಬೆಲೆ ನಿಗದಿಪಡಿಸಿ

ಬೀದರ್:ಜ.5: ತೊಗರಿಗೆ ಪ್ರತಿ ಕ್ವಿಂಟಲ್‍ಗೆ ರೂ. 7,500 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಒತ್ತಾಯಿಸಿದ್ದಾರೆ.

ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.

ಕೊರೊನಾ, ಅತಿವೃಷ್ಟಿ ಹೊಡೆತ, ರಸಗೊಬ್ಬರ, ಆಳು ಸೇರಿದಂತೆ ಬೆಳೆಗಾಗಿ ಮಾಡುವ ಖರ್ಚು ಹೆಚ್ಚಾಗಿ ಕಲ್ಯಾಣ ಕರ್ನಾಟಕ ಭಾಗದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ತೊಗರಿಗೆ ಕ್ವಿಂಟಲ್‍ಗೆ ರೂ. 6,100 ಬೆಲೆ ನಿಗದಿಪಡಿಸಲಾಗಿತ್ತು. ಆದರೆ, ಇದೀಗ ರೂ. 6,000 ಮಾತ್ರ ನಿಗದಿ ಮಾಡಿರುವುದು ದುರದೃಷ್ಟಕರವಾಗಿದೆ ಎಂದು ಹೇಳಿದ್ದಾರೆ.

ರೈತರ ನೋವಿಗೆ ಸ್ಪಂದಿಸಿ ಪ್ರತಿ ಕ್ವಿಂಟಲ್ ತೊಗರಿಗೆ ರೂ. 7,500 ಬೆಲೆ ನಿಗದಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.