ತೊಂದರೆ ಆದರೆ ನೇರವಾಗಿ ದೂರು ನೀಡಿ

ಧಾರವಾಡ, ಮೇ.29 : ಬೀಜ, ರಸಗೊಬ್ಬರ, ವಿಮೆ, ಪರಿಹಾರ, ಕೃಷಿ ಪರಿಕರಗಳ ಸಹಾಯಧನ ಸೇರಿದಂತೆ ಸರಕಾರದ ಎಲ್ಲಾ ಸವಲತ್ತು, ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ. ಬೀಜ, ರಸಗೊಬ್ಬರ ವಿತರಣೆಯಲ್ಲಿ ಸರಕಾರಿ ಇಲಾಖೆ ಅಥವಾ ಸಹಕಾರಿ, ಖಾಸಗಿ ವ್ಯಾಪಾರಸ್ಥರಿಂದ ತೊಂದರೆ ಆದಲ್ಲಿ, ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಅಥವಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಿ. ದೂರುದಾರರ ಮಾಹಿತಿ ಗೌಪ್ಯವಾಗಿಟ್ಟು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತ ಹಿತರಕ್ಷಣೆಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಮುಂಗಾರು ಪೂರ್ವ ಸಿದ್ಧತೆಗಳ ಕುರಿತು ಜಿಲ್ಲೆಯ ರೈತ ಮುಖಂಡರು ಹಾಗೂ ರೈತ ಸಂಘಟನೆಗಳೊಂದಿಗೆ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನ್‍ದಲ್ಲಿ ಬಿತ್ತನೆ ಆರಂಭವಾಗುತ್ತದೆ. ಆದರೆ ಮೇ ತಿಂಗಳ ಮಧ್ಯದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದರಿಂದ ರೈತರು ಜೂನ್ ಪೂರ್ವದಲ್ಲಿ ಬಿತ್ತನೆ ಆರಂಭಿಸಿದ್ದಾರೆ. ಜಿಲ್ಲಾಡಳಿತ ಪೂರ್ವಯೋಚಿತವಾಗಿ ಜಿಲ್ಲೆಯ ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಹೆಚ್ಚುವರಿ ಬೀಜ, ಗೊಬ್ಬರದ ದಾಸ್ತಾನು ಮಾಡಿದೆ. ರೈತರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಗೊಡದೆ ಸಮಾಧಾನದಿಂದ ಅಗತ್ಯ ಬೀಜ, ರಸಗೊಬ್ಬರ ಪಡೆಯಬೇಕು. ಸರಕಾರದ ನಿಯಮಾನುಸಾರ ಪ್ರತಿ ರೈತರಿಗೆ ನೀಡಬೇಕಾದ ಬೀಜ, ರಸಗೊಬ್ಬರ ವಿತರಿಸಲು ಜಿಲ್ಲಾಡಳಿತ ಸಿದ್ದವಿದ್ದು, ಈಗಾಗಲೇ ಅಗತ್ಯ ಕ್ರಮವಹಿಸಿದೆ ಎಂದು ಅವರು ಹೇಳಿದರು.
ರೈತರ ಬೇಡಿಕೆ ಅನುಸಾರ ನಾಳೆಯಿಂದ ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರೈತರ ಪಾಳಿ ಮುಗಿಯುವವರೆಗೆ ಬೀಜಗಳನ್ನು ವಿತರಿಸಲಾಗುತ್ತದೆ. ಇದಕ್ಕೆ ಅಗತ್ಯ ವಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಬೇರೆ ಇಲಾಖೆಗಳಿಂದ ನಿಯೋಜಿಸಿ, ಸೂಕ್ತ ಬಂದೋಬಸ್ತ್ ನೀಡಲಾಗುತ್ತದೆ. ಈ ಕುರಿತು ಜಂಟಿ ನಿರ್ದೇಶಕರು ವ್ಯವಸ್ಥಿತ ಕ್ರಮವಹಿಸುತ್ತಾರೆ. ತಡರಾತ್ರಿ ಆದರೂ ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರದ ಆರ್ಥಿಕ ಕಾರ್ಯಗಳಿಗೆ ಸಹಕಾರ ನೀಡಬೇಕು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ರೈತ ಸಂಪರ್ಕ ಕೇಂದ್ರಗಳಿರುವ ಬ್ಯಾಂಕ್ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ರಸಗೊಬ್ಬರ ಮಾರಾಟ ಮಾಡುವ ಸಹಕಾರಿ ಸಂಸ್ಥೆಗಳು, ಖಾಸಗಿ ಆಗ್ರೋ ಕೇಂದ್ರಗಳು, ಚಿಲ್ಲರೆ ಮಾರಾಟಗಾರರು ಅನಗತ್ಯವಾಗಿ ರೈತರಿಗೆ ಗೊಬ್ಬರಕ್ಕೆ ಲಿಂಕ್ ಜಿಂಕ್ ಹೆಸರಿನಲ್ಲಿ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ರಸಗೊಬ್ಬರ ವ್ಯಾಪಾರಿಗಳು ಗುಣಮಟ್ಟ, ಸಮರ್ಪಕ ಮತ್ತು ಸರಕಾರ ನಿಗದಿ ಪಡಿಸಿದ ದರದಲ್ಲಿ ರಸಗೊಬ್ಬರ ವಿತರಿಸುವುದು ಕಡ್ಡಾಯ. ರೈತರಿಗೆ ಅಗತ್ಯ ಇರುವ ರಸಗೊಬ್ಬರ ಮಾತ್ರ ನೀಡಬೇಕು. ಲಿಂಕ್ ಜಿಂಕ್ ಹೆಸರಿನಲ್ಲಿ ರೈತರಿಗೆ ಬೇಡವಾದ ರಸಗೊಬ್ಬರ, ರಾಸಾಯನಿಕ ಖರೀದಿಸಲು ಒತ್ತಾಯಿಸಿದರೆ ಅಥವಾ ರಸಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತಕ್ಷಣ ಅವರ ಲೈಸನ್ಸ್ ರದ್ದುಪಡಿಸಲು ಕೃಷಿ ಇಲಾಖೆಗೆ ನಿರ್ದೇಶನ ನೀಡಿದ್ದೆನೆ, ರೈತರು, ಸಾಮಾನ್ಯರು ಇಂತಹ ದೂರುಗಳಿದಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅಥವಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ನೀಡಬೇಕು. ಬಯಸಿದಲ್ಲಿ ದೂರುದಾರರ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾಡಳಿತ, ಕೃಷಿ ಇಲಾಖೆ ಮೂಲಕ ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ಸೀಗುವಂತೆ ಪ್ರಾಮಾಣಿಕ ಕಾರ್ಯ ಮಾಡುತ್ತದೆ. ಕ್ರಮತೆಗೆದುಕೊಳ್ಳುವ ಅಧಿಕಾರ ನನಗೆ ಇರುವುದರಿಂದ ನೇರವಾಗಿ ನಿಮ್ಮ ತೊಂದರೆ ತಿಳಿಸಿ, ತಕ್ಷಣ ಕ್ರಮ ವಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದರು.

ರಸಗೊಬ್ಬರ ವಿತರಣಾ ಕೇಂದ್ರಗಳನ್ನು ಹೆಚ್ಚಿಸಲು ಕ್ರಮವಹಿಸಲಾಗುವುದು. ಆಯಾ ಗ್ರಾಮಗಳ ಸಹಕಾರಿ ಸಂಘ, ಸಂಸ್ಥೆಗಳು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ನೀಡುವ ಅಗತ್ಯ ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯಲಿ. ಅಂತಹ ಸೊಸೈಟಿಗಳಿಗೆ ಪರವಾನಿಗೆ ನೀಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬೆಳೆ ಪರಿಹಾರ ಕುರಿತು ಧಾರವಾಡ ಕೃಷಿ ಇಲಾಖೆಯಿಂದ ವಿಶೇಷ ಅಧ್ಯಯನ ಮಾಡಿ, ವಿವರವಾದ ವರದಿಯೊಂದಿಗೆ ಸರಕಾರಕ್ಕೆ ಅಗತ್ಯ ಶಿಫಾರಸ್ಸು ಮಾಡಲಾಗುತ್ತದೆ. ಅದರಲ್ಲಿ ಬೀಜ ಬಿತ್ತಿದರು ಮೊಳಕೆ ಒಡೆಯದ, ಮೊಳಕೆಯೊಡೆದರು ಮೇಲೆ ಬರದ, ಮತ್ತು ಬೆಳೆ ಬಂದರೂ ಇಳುವರಿ ಬರದಿರುವ ಹಾಗೂ ರೈತರು ಬಿತ್ತದ ಬೀಜ ಸಮರ್ಪಕವಾಗಿ ಹುಟ್ಟದ್ದರಿಂದ ಭೂಮಿ ಪಾಳು ಬಿದ್ದಿರುವ ಸಮಸ್ಯೆಗಳ ಕುರಿತು ವಿಶ್ಲೇಷಿಸಲಾಗುತ್ತದೆ. ಈ ಕುರಿತು ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದೆ. ರೈತರ ಪರವಾಗಿ, ಅವರ ಹಿತರಕ್ಷಣೆಗಾಗಿ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ನಮ್ಮ ಜಿಲ್ಲೆ, ನಮ್ಮ ರೈತರು ಎಂಬ ಅಭಿಮಾನವಿದೆ. ಮುಕ್ತವಾಗಿ ರೈತರು ತಮ್ಮ ಸಮಸ್ಯೆ, ಸಲಹೆಗಳನ್ನು ತಿಳಿಸಿ, ಸಹಕಾರವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳು ರೈತರಲ್ಲಿ ಕೋರಿದರು.