
ತೈವಾನ್, ಮಾ.೧- ಒಂದೆಡೆ ಅಮೆರಿಕಾದ ವಾಯುಪ್ರದೇಶದಲ್ಲಿ ಬಲೂನ್ ಹಾರಿಸುವ ಮೂಲಕ ಉದ್ಘಟತನ ಸೃಷ್ಟಿಸಿರುವ ಚೀನಾ ಇದೀಗ ತೈವಾನ್‌ನಲ್ಲೂ ತನ್ನ ಕುಟಿಲ ಬುದ್ಧಿ ಪ್ರದರ್ಶಿಸಿದೆ. ಕಳೆದ ೨೪ ಗಂಟೆಗಳಲ್ಲಿ ತೈವಾನ್‌ನ ವಾಯು ರಕ್ಷಣಾ ವಲಯದಲ್ಲಿ ೧೯ ಬಾರಿ ತನ್ನ ವಾಯು ಪಡೆಯ ವಿಮಾನಗಳನ್ನು ನುಗ್ಗಿಸುವ ಮೂಲಕ ಚೀನಾ ಉದ್ದಟತನ ಪ್ರದರ್ಶಿಸಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಚೀನಾ ವಾಯು ರಕ್ಷಣಾ ವಲಯದ ನಿಯಮ ಉಲ್ಲಂಘಿಸಿದ ಬಗ್ಗೆ ತೈವಾನ್‌ನ ರಕ್ಷಣಾ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.
ತೈವಾನ್‌ಗಿಂತ ಚೀನಾದ ಕರಾವಳಿಗೆ ಹತ್ತಿರವಾಗಿದ್ದರೂ ಚೀನಾದ ಜೆ-೧೦ ಯುದ್ಧವಿಮಾನಗಳು ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯದ ನೈಋತ್ಯ ಮೂಲೆಯಲ್ಲಿ ಹಾರಾಟ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಚೀನಾದ ವಿಮಾನವು ತೈವಾನ್ ಜಲಸಂಧಿಯ ಸೂಕ್ಷ್ಮ ಮಧ್ಯದ ರೇಖೆಯನ್ನು ದಾಟಿಲ್ಲ ಎನ್ನಲಾಗಿದೆ. ಇನ್ನು ವಾಯುರಕ್ಷಣಾ ವಲಯ ಪ್ರವೇಶಿಸಿದ ಹಿನ್ನೆಲೆಯಲ್ಲಿ ತೈವಾನ್‌ನ ಪಡೆಗಳು ತನ್ನದೇ ಆದ ವಾಯುಪಡೆಯ ವಿಮಾನಗಳನ್ನು ಕಳುಹಿಸುವುದನ್ನು ಸೇರಿದಂತೆ ಕೂಡಲೇ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿತು. ಕಳೆದ ಆಗಸ್ಟ್‌ನಲ್ಲಿ ತೈವಾನ್ ಬಳಿ ವಿಮಾನಗಳ ಹಾರಾಟ ನಡೆಸಿದಾಗಿನಿಂದ ಚೀನಾದ ವಾಯುಪಡೆಯು ಪ್ರತಿದಿನವೂ ಇಲ್ಲಿನ ಪ್ರದೇಶಗಳಲ್ಲಿ ಹಾರಾಟ ನಡೆಸುತ್ತಿದೆ ಎನ್ನಲಾಗಿದೆ.