ತೈವಾನ್ ಗಡಿ ಬಳಿ ಚೀನಾ ಸಮರಾಭ್ಯಾಸ

ಬೀಜಿಂಗ್,ಏ.೮- ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್ ಅವರ ಅಮೆರಿಕಾ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ ಇದೀಗ ಎದಿರೇಟು ಎಂಬಂತೆ ಶನಿವಾರದಿಂದ ತೈವಾನ್ ಸುತ್ತಲೂ ಮೂರು ದಿನಗಳ ಸಮರಾಭ್ಯಾಸ ಆರಂಭಿಸಿದೆ.
ಅಮೆರಿಕಾ ಪ್ರವಾಸದಲ್ಲಿ ತ್ಸೈ ಇಂಗ್-ವೆನ್ ಅವರು ಯುಎಸ್ ಸ್ಪೀಕರ್ ಸೇರಿದಂತೆ ಹಲವರು ಜೊತೆ ಮಹತ್ವದ ಮಾತುಕತೆ ನಡೆಸಿದ್ದರು. ಸದ್ಯ ತೈವಾನ್‌ಗೆ ಮರಳಿದ ಒಂದು ದಿನದ ಬಳಿಕ ಇದೀಗ ಚೀನಾ, ತೈವಾನ್ ಸುತ್ತಮುತ್ತಲೂ ಸಮರಾಭ್ಯಾಸ ಆರಂಭಿಸಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಈಸ್ಟರ್ನ್ ಥಿಯೇಟರ್ ಕಮಾಂಡ್ ಸಮರಾಭ್ಯಾಸ ನಡೆಸಲಿದೆ. ಇನ್ನು ಸಮರಾಭ್ಯಾಸದ ಬಗ್ಗೆ ಚೀನಾ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲ. ಕೇವಲ ತೈವಾನ್ ಜಲಸಂಧಿಯಲ್ಲಿ ಮತ್ತು ತೈವಾನ್‌ನ ಉತ್ತರ, ದಕ್ಷಿಣ ಮತ್ತು ಪೂರ್ವದಲ್ಲಿ ಯೋಜಿಸಿದಂತೆ ಯುದ್ಧ ಸನ್ನದ್ಧತೆ ಗಸ್ತು ಮತ್ತು ವ್ಯಾಯಾಮಗಳನ್ನು ನಡೆಸಲಿದೆ ಎಂದಷ್ಟೇ ಚೀನಾ ಮಾಹಿತಿ ನೀಡಿದೆ. ಇನ್ನು ಅಮೆರಿಕಾ ಭೇಟಿಯಲ್ಲಿದ್ದ ತ್ಸೈ ಇಂಗ್-ವೆನ್ ಅವರು ಲಾಸ್ ಏಂಜಲೀಸ್‌ನಲ್ಲಿ ಸ್ಪೀಕರ್ ಕೆವಿನ್ ಮೆಕಾರ್ಥಿ ಸೇರಿದಂತೆ ಹಲವರು ಜೊತೆ ಮಾತುಕತೆ ನಡೆಸಿದ್ದರು. ಆದರೆ ತೈವಾನ್ ತನಗೆ ಸೇರಿದ್ದು ಎಂದು ದಶಕಗಳಿಂದ ಹೇಳುತ್ತಲೇ ಬಂದಿರುವ ಚೀನಾಗೆ ತ್ಸೈ ಅವರ ಭೇಟಿಯು ಸಹಜವಾಗಿಯೇ ಇರಿಸುಮುರಿಸು ತರುವ ಜೊತೆಗೆ ಅಕ್ರೋಶ ಮೂಡುವಂತೆ ಮಾಡಿತ್ತು. ಅಲ್ಲದೆ ಅಮೆರಿಕಾದಲ್ಲಿರುವ ತೈವಾನ್‌ನ ರಾಯಬಾರಿ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ಕೂಡ ಈಗಾಗಲೇ ಹೇರಲಾಗಿದೆ.