ತೈಲ ಬೆಲೆ ಹೆಚ್ಚಳ ರಾಜ್ಯಗಳ ಪ್ರಶ್ನಿಸಲು ನಿರ್ಮಲಾ ಸಲಹೆ

ನವದೆಹಲಿ.ನ.೧೬- ಪೆಟ್ರೋಲ್ ಡೀಸೆಲ್ ಸೇರಿ ತೈಲಬೆಲೆ ಗಣನೀಯ ಹೆಚ್ಚಳ ಸಂಬಂಧ ಜನರು ಆಯಾ ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಈ ಸಂಬಂಧ ಜನರು ತಮ್ಮ ತಮ್ಮ ರಾಜ್ಯಗಳೂ ಕೂಡ ತೈಲಬೆಲೆ ಮೇಲಿನ ಸುಂಕ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಮಗ್ರವಾದ ಬೆಲೆ ನಿಗದಿ ಮಾಡುವ ತನಕ ಪೆಟ್ರೋಲ್ ಮತ್ತು ಡೀಸೆಲ್ ಸರಕು ಸೇವಾ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿಧಿಸುತ್ತಿದ್ದ ತೆರಿಗೆಯ ಕಡಿತ ಮಾಡಿದೆ ಅದೇ ರೀತಿ ರಾಜ್ಯ ಸರ್ಕಾರಗಳು ಕಡಿತ ಮಾಡಬೇಕು. ಈ ಹಿನ್ನೆಲೆಯಲ್ಲಿ ಜನರು ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಮಾಡಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ೫ ರೂಪಾಯಿ ಮತ್ತು ಡೀಸೆಲ್ ಮೇಲೆ ೧೦ ರೂಪಾಯಿ ಇಳಿಕೆ ಮಾಡಿ ದೇಶದ ಜನರಿಗೆ ದೀಪಾವಳಿ ಉಡುಗೊರೆ ನೀಡಿದೆ ಹಲವು ರಾಜ್ಯಗಳಲ್ಲಿ ಕೂಡ ಇಳಿಕೆ ಮಾಡಿದ್ದು. ಇನ್ನೂ ರಾಜ್ಯಗಳು ಸುಂಕ ಇಳಿಕೆ ಮಾಡಬೇಕಾಗಿದೆ. ಈ ಸಂಬಂಧ ಜನರು ತಮ್ಮ ತಮ್ಮ ರಾಜ್ಯಗಳ ಸರ್ಕಾರಗಳನ್ನು ಪ್ರಶ್ನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಹಲವು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಸುಂಕವನ್ನು ಮತ್ತಷ್ಟು ಕಡಿಮೆ ಮಾಡುವಂತೆ ಸಲಹೆ ನೀಡಿದೆ ಕೇರಳದ ಹಣಕಾಸು ಸಚಿವರು ನಷ್ಟ ತುಂಬಿಕೊಡುವಂತೆ ಮನವಿ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇತ್ತೀಚೆಗೆ ನಡೆದ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಪರಾಭವಗೊಂಡ ಹಿನ್ನೆಲೆಯಲ್ಲಿ ಹಾಗೂ ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತೆರಿಗೆ ಕಡಿಮೆ ಮಾಡಿದೆ.