ತೈಲ ಬೆಲೆ ಏರಿಕೆ ವಿರೋಧಿಸಿ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಕಲಬುರಗಿ,ಜೂ.11- ಪೆಟ್ರೋಲ್ ಮತ್ತು ಡೀಸೆಲ್ ದರದ ನಿರಂತರ ಏರಿಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಇಂದು 100 ನಾಟ್ ಔಟ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಎಂ.ವೈ.ಪಾಟೀಲ, ಮಾಜಿ ಶಾಸಕ ಬಿ.ಆರ್.ಪಾಟೀಲ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ವಿಜಯಕುಮಾರ ಜಿ.ರಾಮಕೃಷ್ಣ, ಮಹಿಳಾ ಕಾಂಗ್ರೆಸ್ ಮುಖಂಡರಾದ ಚಂದ್ರಿಕಾ ಪರಮೇಶ್ವರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ನಗರದ ಲಾಹೋಟಿ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದರು.
ಕೋವಿಡ್ ಮಹಾಮಾರಿಯ ಪಿಡುಗಿನಿಂದ ಹೈರಾಣಾಗಿರುವ ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್-ಡೀಸಲ್ ಬೆಲೆ ಏರಿಸಿ ಗದಾ ಪ್ರಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪೆಟ್ರೋಲ್ ಬೆಲೆ ಏರಿಸಿರುವ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.