ತೈಲ ಬೆಲೆ ಏರಿಕೆ ವಿರೋಧಿಸಿ ಎತ್ತಿನಗಾಡಿಯೊಂದಿಗೆ ಪ್ರತಿಭಟಿಸಿದ ಕಾಂಗ್ರೆಸ್

ಬಳ್ಳಾರಿ, ಜೂ.11: ನಗರದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಮುಖಂಡರು ತೈಲ ಬೆಲೆ ಏರಿಕೆ ಆಗಿರುವುದನ್ನು ವಿರೋಧಿಸಿ ಎತ್ತಿನಗಾಡಿಯಲ್ಲಿ ಬಂದು ಪ್ರತಿಭಟಿಸಿ ತಮ್ಮ ಆಕ್ರೋಶವನ್ನು ಕೇಂದ್ರ ಸರ್ಕಾರದ ವಿರುದ್ಧ ಪ್ರದರ್ಶಿಸಿದರು.
ಕರೋನಾ ಹಿನ್ನಲೆಯಲ್ಲಿ ಪೋಷಣೆ ಮಾಡಿರುವ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿಯೂ ನೂರಕ್ಕೂ ಹೆಚ್ಚಿನ ಜನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದ ಗಡಿಗಿ ಚೆನ್ನಪ್ಪ ವೃತ್ತಕ್ಕೆ ಎತ್ತಿನಬಂಡಿಯಲ್ಲಿ ಆಗಮಿಸಿದರು.
ಕೇಂದ್ರ ಸರ್ಕಾರ ಲಾಕ್ ಡೌನ್ ವೇಳೆ ಪ್ರತಿಭಟನೆಗೆ ಅವಕಾಶ ಇಲ್ಲವೆಂದು ಮನಸೋ ಇಚ್ಛೆ ತೈಲ ಧರ ಏರಿಕೆ ಮಾಡಿದೆ. ಆದರೂ ಜವಾಬ್ದಾರಿಯುತ ಪಕ್ಷವಾಗಿ ನಾವು ನಿಯಮ ಉಲ್ಲಂಘನೆ ಮಾಡಿಯಾದರೂ ಪ್ರತಿಭಟಿಸಿ ಕೇಂದ್ರ ಸರ್ಕಾರಕ್ಕೆ ನಮ್ಮ ನಿಲುವು ಪ್ರದರ್ಶಿಸಬೇಕೆಂದು ಇಂದಿನಿಂದ ಐದುದಿನಗಳ ಕಾಲ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಹಿನ್ನಲೆಯಲ್ಲಿ ಇಂದು ನಗರದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮತ್ತು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ನಾಗೇಂದ್ರ ಅವರು, ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ 125 ಡಾಲರ್ ಇತ್ತು. ಆಗ ಪೆಟ್ರೋಲ್, ಡೀಸೆಲ್ ದರವನ್ನು ಈ ಪ್ರಮಾಣದಲ್ಲಿ ಏರಿಕೆ ಮಾಡಿರಲಿಲ್ಲ. ಮೋದಿಯವರು ಪ್ರಧಾನಿಯಾದ ಬಳಿಕ ಒಂದು ಹಂತದಲ್ಲಿ ಕಚ್ಛಾ ತೈಲ ದರ 46-47 ಡಾಲರ್‌ಗೆ ಕುಸಿದಿತ್ತು. ಆಗ ಗ್ರಾಹಕರಿಗೆ ಕಡಿಮೆ ಬೆಲೆಗೆ ಏಕೆ ಕೊಡಲಿಲ್ಲ
ಪೆಟ್ರೋಲ್, ಡೀಸೆಲ್ ಮಾರಾಟದ ಮೇಲಿನ ಅಬಕಾರಿ ಸುಂಕ 2013-14ರಲ್ಲಿ 3.45 ರೂ. ಹಾಗೂ 9.25 ರೂ. ಇತ್ತು. ಈಗ ಪೆಟ್ರೋಲ್ ಮಾರಾಟದ ಮೇಲೆ 31.84 ರೂ. ಡೀಸೆಲ್ ಮಾರಾಟದ ಮೇಲೆ, 32.98 ರೂ. ಹೆಚ್ಚಿಸಲಾಗಿದೆ.
ರಾಜ್ಯ ಸರ್ಕಾರ ಪೆಟ್ರೋಲ್ ಮಾರಾಟದ ಮೇಲೆ ಶೇ. 35, ಡೀಸೆಲ್ ಮಾರಾಟದ ಮೇಲೆ ಶೇ. 24 ತೆರಿಗೆ ವಿಧಿಸುತ್ತಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ 414 ರೂ.ಗಳಿಂದ 850 ರೂ.ಗಳಿಗೆ ಏರಿಕೆಯಾಗಿದೆ. ಇದು ಲೂಟಿ ಅಲ್ಲದೇ ಮತ್ತೇನು. ಇದೇನಾ ಅಚ್ಛೇ ದಿನ್ ಎಂದು ಪ್ರಶ್ನಿಸಿದರು
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರು ಮಾತನಾಡಿ, ಪ್ರಧಾನಿ ಮೋದಿ ಅವರಿಗೆ ಪ್ರಧಾನಿ ಆಗುವ ಮುನ್ನ ಆಡಿದ ಮಾತುಗಳೇ ಬೇರೆ ಈಗ ಅವರು ಜನ ವಿರೋಧಿ ನೀತಿಗಳ ಬಗ್ಗೆ ಪ್ರಶ್ನಿಸಿದರೆ ಮೌನಿಯಾಗುತ್ತಾರೆ. ಬೇರೆಯದ್ದಕ್ಕೆ ಮಾತ್ರ ಟಿವಿ ಪರದೆ ಮುಂದೆ ಒಂದು ಗಂಟೆ ಗಟ್ಟಲೆ ಮಾತನಾಡುತ್ತಾರೆ. ರಾಮರಾಜ್ಯದ ಬಗ್ಗೆ ಮಾತನಾಡುವ ಇವರ ದೇಶದಲ್ಲಿ ತೈಲ ಬೆಲೆ 100ರೂ ಗೂ ಹೆಚ್ಚಿದೆ. ಪಕ್ಕದ ರಾವಣ ರಾಜ್ಯ ಶ್ರೀಲಂಕಾದಲ್ಲಿ 59 ರೂ ಇದೆ. ಇದೇ ಇವರು ದೇಶಕ್ಕೆ ನೀಡುವ ಆಡಳಿತದ ಪರಿಕಲ್ಪನೆಯಾಗಿದೆ.
ಅಂದು ಕಾಂಗ್ರೆಸ್ ಅಧಿಕಾರದಲ್ಲಿದ್ದು ಮನಮೋಹನ್ ಸಿಂಗ್ ಅವರು ಹೆಚ್ಚಿಗೆ ಮಾತನಾಡದಿದ್ದರೂ ತೈಲ ಧರ ನಿಯಂತ್ರಣದಲ್ಲಿಟ್ಟಿದ್ದು ಆ ಕೆಲಸ ಇವರೇಕೆ ಮಾಡುತ್ತಿಲ್ಲ. ಇವರು ಕೆಲ ಉದ್ಯಮಿಗಳ ಹೊಟ್ಟೆ ತುಂಬಿಸಲು ದೇಶವನ್ನೇ ಲೂಟಿ ಹೊಡೆಯುತ್ತಿದ್ದಾರೆ.
ತೈಲ ಬೆಲೆ, ವಿದ್ಯುತ್ ಧರ ಹೆಚ್ಚಳದಿಂದ ಜನ ಸಾಮಾನ್ಯರ ಬದುಕಿಗೆ ಬೆಂಕಿ ಹಾಕಿದ್ದಾರೆಂದು ವಾಗ್ವಾದ ನಡೆಸಿದರು. ಪಕ್ಷದ ಮುಖಂಡರುಗಳಾದ ಅಸುಂಡಿ ನಾಗರಾಜಗೌಡ, ಎ.ಮಾನಯ್ಯ, ಮುಂಡರಗಿ ನಾಗರಾಜ್, ರಾಂಪ್ರಸಾದ್, ಪಾಲಿಕೆ ಸದಸ್ಯರುಗಳಾದ ವಿವೇಕ್, ಗಾದೆಪ್ಪ, ಮೊದಲಾದವರು ಇದ್ದರು.