ತೈಲ ಬೆಲೆ ಏರಿಕೆ ವಿರುದ್ಧ ಜೂ. ೨೦ಕ್ಕೆ ರಸ್ತೆ ತಡೆ : ಬಿವೈವಿ

ತುಮಕೂರು, ಜೂ. ೧೮- ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಜೂ. ೨೦ ರಂದು ರಾಜ್ಯಾದ್ಯಂತ ರಸ್ತೆ ರೋಖೋ ಚಳವಳಿ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ತಿಳಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಿನ್ನೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದೇವೆ. ರಾಜ್ಯದಲ್ಲಿ ಭಂಡ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಹೋರಾಟವನ್ನು ಮುಂದುವರೆಸುವ ಅನಿವಾರ್ಯತೆ ಇರುವುದರಿಂದ ಗುರುವಾರ ರಸ್ತೆ ರೋಖೋ ಚಳವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದೇವೆ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ದೂರುತ್ತಾ ತಮ್ಮ ಸರ್ಕಾರದ ಹುಳುಕನ್ನು ಮುಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಹಾಲಿನ ದರ, ವಿದ್ಯುತ್ ದರ, ಅಬಕಾರಿ ಸುಂಕ, ಮುದ್ರಾಂಕ ಶುಲ್ಕ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಏರಿಕೆ ಮಾಡಿದೆ. ಇಷ್ಟೆಲ್ಲಾ ತೆರಿಗೆ ಜಾಸ್ತಿ ಮಾಡಿ ಸರ್ಕಾರದ ಆದಾಯವನ್ನು ವೃದ್ಧಿಕೊಂಡಿದೆ. ಈ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಣ ಬೇನಾಮಿ ಖಾತೆ ಮುಖಾಂತರ ಆಂಧ್ರಕ್ಕೆ ಹೋಗಿದೆ. ಆಂಧ್ರ ಚುನಾವಣೆಯಲ್ಲಿ ಆ ಹಣ ಬಳಕೆಯಾಗಿದೆ. ಇಷ್ಟೆಲ್ಲಾ ಭ್ರಷ್ಟಾಚಾರ ನಡೆದಿದ್ದರೂ ಹಣಕಾಸು ಮಂತ್ರಿಯಾಗಿರುವ ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಪದೇ ಪದೇ ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುತ್ತೀರಿ, ನಾವು ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತೀರಿ, ಎಂದು ವಿಜಯೇಂದ್ರ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರೈತರಿಗೆ, ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿಗಳು ಇದನ್ನು ಗಮನಿಸಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳು ಉಡಾಫೆ ಉತ್ತರ ಕೊಡುವುದನ್ನು ಬಿಟ್ಟು ತೈಲ ಬೆಲೆ ಇಳಿಕೆ ಮಾಡುವತ್ತ ಗಮನ ಹರಿಸಬೇಕು. ಈ ಹಿಂದೆ ಬಸವರಾಜು ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ತೈಲ ಬೆಲೆಯಲ್ಲಿ ೭ ರೂಪಾಯಿ ಕಡಿಮೆ ಮಾಡಲಾಗಿತ್ತು ಎಂದರು.
ರಾಜ್ಯ ಸರ್ಕಾರ ಎಡವುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಈಗ ಉತ್ತಮ ಮಳೆಯಾಗುತ್ತಿದೆ. ರೈತರು ಟ್ರ್ಯಾಕ್ಟರ್, ಟಿಲ್ಲರ್, ಪಂಪ್‌ಸೆಟ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಲೀಟರ್‌ಗೆ ಮೂರುವರೆ ರೂಪಾಯಿ ಜಾಸ್ತಿ ಮಾಡಿದರೆ ಅದರ ಹೊರೆ ರೈತರ ಮೇಲೆ ಬೀಳೋದಿಲ್ಲವ್ವಾ, ಜನಸಾಮಾನ್ಯರ ಮೇಲೆ ಹೊರೆಯಾಗುವುದಿಲ್ಲವ್ವಾ. ಈ ಬಗ್ಗೆ ನೀವುಗಳೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ ಎನ್ನುತ್ತೀರಾ, ನಿಮ್ಮ ಆದಾಯವನ್ನು ಏನುಮಾಡುತ್ತಿದ್ದೀರಾ, ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ರಾಜ್ಯದ ಆದಾಯ ಅಧಿಕವಿತ್ತು. ಆದಾಯ ಹೆಚ್ಚಳವಿದ್ದ ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಯಾವ ರೀತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅತಿ ಹೆಚ್ಚು ಬಜೆಟ್ ಮಂಡಿಸಿರುವ ಅನುಭವಿ ಮುಖ್ಯಮಂತ್ರಿಯಾಗಿದ್ದರೂ ಸಹ ಆದರೂ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಅಧೋಗತಿಗೆ ತಂದಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಜನಸಾಮಾನ್ಯರಿಗೆ ಹೊರೆ ಮಾಡುತ್ತಿರುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಗುರುವಾರ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸೇರಿ ನಾವೆಲ್ಲರೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ರಾಮಮೂರ್ತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಎಸ್. ಶಿವಪ್ರಸಾದ್, ಡಾ. ಪರಮೇಶ್, ಸ್ಫೂರ್ತಿ ಚಿದಾನಂದ್, ಬ್ಯಾಟರಂಗೇಗೌಡ, ರುದ್ರೇಶ್, ಗ್ಯಾಸ್ ಚಂದ್ರಶೇಖರಬಾಬು ಮತ್ತಿತರರು ಉಪಸ್ಥಿತರಿದ್ದರು.