ತೈಲ ಬೆಲೆ ಏರಿಕೆ ಖಂಡಿಸಿ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ,ಜೂ.11: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗದಲ್ಲಿಂದು 6ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.ನಗರದ ಆರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು, ಆಂಬುಲೆನ್ಸ್ನಲ್ಲಿ ಕೊರೊನಾ ಸೋಂಕಿತನಂತೆ ಕಾರ್ಯಕರ್ತರೊಬ್ಬನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಡೀಸೆಲ್ ಖಾಲಿಯಾಗಿ ಆಂಬುಲೆನ್ಸ್ ನಿಂತು ಹೋದಾಗ, ಒಂಟಿ ಎತ್ತಿನ ಬಂಡಿಯಲ್ಲಿ ಆತನನ್ನು ಜಿಲ್ಲಾಸ್ಪತ್ರೆ ಸಾಗಿಸುವ ಅಣಕು ಪ್ರದರ್ಶನ ನಡೆಸುವ ಮೂಲಕ ಸರ್ಕಾರದ ಗಮನ ಸಳೆಯಲು ಪ್ರಯತ್ನಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಕೊರೊನಾ ಸೋಂಕಿನ ಕಾರಣಕ್ಕೆ ದೇಶವೇ ತತ್ತರಿಸಿದೆ. ಸೋಂಕಿನ ನಿಯಂತ್ರಣ ಕ್ರಮವಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಕಾರಣ ಜನತೆ ದುಡಿಮೆ ಇಲ್ಲದೆ ಕುಟುಂಬ ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಿಸುವ ಮೂಲಕ ಜನರ ಗಾಯದ ಮೇಲೆ ಬರ ಎಳೆದಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಕಳೆದ ಆರು ತಿಂಗಳಲ್ಲಿ ಬರೊಬ್ಬರಿ 47 ಬಾರಿ ಇಂಧನ ಬೆಲೆ ಹೆಚ್ಚಿಸಿದೆ. ಹೀಗಾಗಿ ಅಗತ್ಯ ವಸ್ತುಗಳ ಸರಕು ಸಾಗಾಟದ ವೆಚ್ಚ ಹೆಚ್ಚಾಗಿ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ಜನರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡೇ ಬೆಳೆದಿರುವುದು. ಒಂದು ಪ್ರಧಾನಿ ನರೇಂದ್ರ ಮೋದಿ ಗಡ್ಡ ಹಾಗೂ ಮತ್ತೊಂದು ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ. ಈ ಸರ್ಕಾರದಷ್ಟು ತೆರಿಗೆಯನ್ನು ಬ್ರಿಟಿಷರು ಸಹ ವಿಧಿಸಿರಲಿಲ್ಲ. ಇದೊಂದು ದಪ್ಪ ಚರ್ಮದ ಸರ್ಕಾರವಾಗದ್ದು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳು ಬೆಲೆ ಏರಿಕೆ ವಿಷಯದಲ್ಲಿ ಸರ್ಕಾರದ ಕಿವಿಹಿಂಡಬೇಕೆAದು ಮನವಿ ಮಾಡಿದರು.
ನಗರದ ವಿವಿಧ ಪೆಟ್ರೋಲ್ ಬಂಕ್‌ಗಳ ಬಳಿಯಲ್ಲಿ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್, ಪರಿಶಿಷ್ಟ ಜಾತಿ ಘಟಕ, ಅಸಂಘಟಿತ ಕಾರ್ಮಿಕ ಘಟಕ, ವಿದ್ಯಾರ್ಥಿ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.
ವಿವಿಧೆಡೆ ನಡೆದ ಪ್ರತಿಭಟನೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಕೆ.ಚಮನ್ ಸಾಬ್, ಕಾಂಗ್ರೆಸ್ ಮುಖಂಡರಾದ ಬಿ.ಎಚ್.ವೀರಭಪ್ಪ, ಲಿಯಾಕತ್ ಅಲಿ, ಎಲ್.ಎಚ್.ಸಾಗರ್, ರಾಘವೇಂದ್ರಗೌಡ, ದೇವರಮನೆ ಗೋಪಿ ಸೇರಿದಂತೆ ಹಲವು ಭಾಗವಹಿಸಿದ್ದರು.