ತೈಲ ಬೆಲೆ ಏರಿಕೆ, ಕಾಂಗ್ರೆಸ್ ಪ್ರತಿಭಟನೆ

-100 not out.....congress workers staging protest at nehru cricle sasadaraipur regarding petrol and diesel rate hike siddu shivakumar desapandey dinesh gudu rao Front page

ಬೆಂಗಳೂರು,ಜೂ.೧೧- ಪೆಟ್ರೋಲ್ ಮತ್ತು ಡೀಸೆಲ್ ದರದ ನಿರಂತರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಇಂದು ೧೦೦ ನಾಟ್‌ಔಟ್ ಹೆಸರಿನಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿತು.
ಕೋವಿಡ್ ಮಹಾಮಾರಿಯ ಪಿಡುಗಿನಿಂದ ಹೈರಾಣಾಗಿರುವ ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸಲ್ ಬೆಲೆ ಏರಿಸಿ ಗದಾ ಪ್ರಹಾರ ನಡೆಸಿದೆ ಎಂದು ದೂರಿರುವ ಕಾಂಗ್ರೆಸ್ ಪಕ್ಷ, ಈ ದರ ಏರಿಕೆಯನ್ನು ಖಂಡಿಸಿ ೧೦೦ ನಾಟ್‌ಔಟ್ ಹೆಸರಿನಲ್ಲಿ ದೇಶದಾದ್ಯಂತ ಚಳವಳಿ ನಡೆಸಿದ್ದು, ರಾಜ್ಯದಲ್ಲೂ ೧೦೦ ನಾಟ್‌ಔಟ್ ಆಂದೋಲನದ ಭಾಗವಾಗಿ
೫ ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳ ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಬೆಂಗಳೂರಿನ ಬಹುತೇಕ ಪೆಟ್ರೋಲ್ ಬಂಕ್‌ಗಳ ಮುಂದೆ ಇಂದು ಬೆಳಿಗ್ಗೆಯೇ ಕಾಂಗ್ರೆಸ್ ಕಾರ್ಯಕರ್ತರು ಗುಂಪುಗೂಡಿ ಕಾಂಗ್ರೆಸ್‌ನ ಧ್ವಜ ಹಿಡಿದು, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಪೆಟ್ರೋಲ್ ಬೆಲೆ ಏರಿಸಿರುವ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪೆಟ್ರೋಲ್-ಡೀಸೆಲ್ ದರ ವಿರೋಧಿಸಿ ರಾಜ್ಯಾದ್ಯಂತ ಮುಂದಿನ ೫ ದಿನಗಳ ಕಾಲ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ.
ಡಿಕೆಶಿ-ಸಿದ್ದರಾಮಯ್ಯ ಭಾಗಿ
ಬೆಂಗಳೂರಿನ ಶೇಷಾದ್ರಿಪುರದ ಶಿವಾನಂದ ಸರ್ಕಲ್‌ನ ಸಮೀಪದಲ್ಲಿರುವ ರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಮುಖಂಡರಾದ ಆರ್.ವಿ. ದೇಶ್‌ಪಾಂಡೆ, ದಿನೇಶ್‌ಗುಂಡೂರಾವ್ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರುಗಳು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪೆಟ್ರೋಲ್-ಡೀಸೆಲ್ ಬೆಲೆ ನಿರಂತರ ಏರಿಕೆಯನ್ನು ಖಂಡಿಸಿ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಟ್ಟೆ ಬಡಿದ ಕಾರ್ಯಕರ್ತರು
ಪೆಟ್ರೋಲ್-ಡೀಸೆಲ್ ದರ ಏರಿಕೆಯನ್ನು ಅಣಕಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ವೃತ್ತಕಾರಾವಾಗಿ ನಿಂತು ತಟ್ಟೆ ಬಡಿದು ದರ ಏರಿಕೆಯನ್ನು ಅಣಕಿಸಿದ್ದು ವಿಶೇಷವಾಗಿತ್ತು.
ಬಂಧನ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ದರು.
ನಂತರ ಈ ನಾಯಕರುಗಳನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರಿನಲ್ಲಿ ಸೆಕ್ಷೆನ್ ೧೪೪ ಜಾರಿಯಲ್ಲಿದ್ದು, ನಿಷೇಧಾಜ್ಞೆ ಉಲ್ಲಂಘಿಸಿ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದ ವಿರೋಧ ಪಕ್ಷದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಕೈ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಇವರನ್ನೆಲ್ಲ ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದರು.