ತೈಲ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಕೈ ವಿರುದ್ಧ ಕಿಡಿ
(ಸಂಜೆವಾಣಿ ಪ್ರತಿನಿಧಿಯಿಂದ)
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ರವರು ಎತ್ತಿನಗಾಡಿ ಮೇಲೆ ಆಗಮಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

ಬೆಂಗಳೂರು,ಜೂ.೧೭:ರಾಜ್ಯದಲ್ಲಿ ಪೆಟ್ರೋಲ್-ಡೀಸಲ್‌ನ ದರ ಏರಿಕೆ ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಕಳೆದ ಶನಿವಾರ ರಾಜ್ಯಸರ್ಕಾರ ಪೆಟ್ರೋಲ್-ಡೀಸಲ್ ಮೇಲಿನ ಮಾರಾಟ ತೆರಿಗೆಯನ್ನು ಏರಿಸಿತ್ತು. ಇದರಿಂದ ಪೆಟ್ರೋಲ್ ದರ ಲೀ. ೩ ರೂ. ಮತ್ತು ಡೀಸಲ್ ದರ ೩.೫೦ ಪೈ. ಹೆಚ್ಚಳವಾಗಿತ್ತು. ಈ ದರ ಏರಿಕೆಗೆ ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ದರ ಏರಿಕೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಆದರೆ,ಮುಖ್ಯಮಂತ್ರಿ ಸಿದ್ದರಾಮಯ್ಯರವರು ದರ ಏರಿಕೆಯನ್ನು ಸಮರ್ಥಿಸಿಕೊಂಡು ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್-ಡೀಸಲ್ ದರ ಕಡಿಮೆ ಇದೆ ಎಂದು ಹೇಳಿದರು.ಸರ್ಕಾರದ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಹೋರಾಟ ನಡೆಸಿದ್ದು, ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿತು.ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಹಲವು ಶಾಸಕರು, ಸಂಸದರು, ಮುಖಂಡರುಗಳು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪೆಟ್ರೋಲ್-ಡೀಸಲ್ ದರ ಇಳಿಕೆ ಮಾಡುವ ಘೋಷಣೆಯ ಜತೆಗೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ, ಪೆಟ್ರೋಲ್-ಡೀಸಲ್ ಬೆಲೆ ಏರಿಕೆಯಿಂದ ಜನಸಮಾನ್ಯರಿಗೆ ತೊಂದರೆಯಾಗುತ್ತದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಇದರಿಂದ ಆಗಲಿದೆ. ಕೂಡಲೇ ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ಇದು ಜನ ವಿರೋಧಿ ಸರ್ಕಾರ
ಪೆಟ್ರೋಲ್-ಡೀಸಲ್ ದರ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆಗೂ ಮುನ್ನ ಡಾಲರ್‍ಸ್ ಕಾಲೋನಿಯ ಯಡಿಯೂರಪ್ಪರವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಪೆಟ್ರೋಲ್-ಡೀಸಲ್ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರು ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ ಅವರು, ದರ ಏರಿಕೆ ವಾಪಸ್ ಆಗುವವರೆಗೂ ಬಿಜೆಪಿಯ ಹೋರಾಟ ನಿಲ್ಲದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬೇರೆ ರಾಜ್ಯಗಳಲ್ಲಿ ದರ ಹೆಚ್ಚಿದೆ ಎಂಬ ಉಡಾಫೆಯ ಮಾತುಗಳನ್ನು ಬಿಟ್ಟು ಏರಿಸಿರುವ ಪೆಟ್ರೋಲ್-ಡೀಸಲ್ ದರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರಡಿಭಟನೆಯಲ್ಲಿ ನೂರಾರು ಮಂದಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರವರು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಆ ರಾಜ್ಯದಲ್ಲಿ ಪೆಟ್ರೋಲ್-ಡೀಸಲ್ ದರವನ್ನು ೩ರೂ. ಇಳಿಕೆ ಮಾಡಿದ್ದರು. ಆಗ ಸಿದ್ದರಾಮಯ್ಯರವರು ರಾಜ್ಯದಲ್ಲೂ ಪೆಟ್ರೋಲ್-ಡೀಸಲ್ ದರ ಇಳಿಕೆ ಮಾಡಬೇಕು ಕಾಂಗ್ರೆಸ್ ಸರ್ಕಾರವಿದ್ದರೆ ೧೦ ರೂ. ಪೆಟ್ರೋಲ್-ಡೀಸಲ್ ದರ ಕಡಿಮೆ ಮಾಡುವುದಾಗಿ ಹೇಳಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಪೆಟ್ರೋಲ್-ಡೀಸಲ್ ದರವನ್ನು ೧೦ ರೂ. ಕಡಿಮೆ ಮಾಡಿ ತಮ್ಮ ಮಾತಿನಂತೆ ನಡೆದುಕೊಳ್ಳಲಿ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಿರುವುದರಿಂದ ಪೆಟ್ರೋಲ್-ಡೀಸಲ್ ದರ ಏರಿಕೆ ಮಾಡಲಾಗಿದೆ. ಕಾಂಗ್ರೆಸ್‌ನ ಶಾಸಕರಾದ ನಾಡಗೌಡ ಅವರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲ. ನಾನು ರಾಜಕೀಯ ಮಾಡುವುದೇ ಕಷ್ಟವಾಗಿದೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿ ರಾಜ್ಯದ ಆಡಳಿತ ಹೇಗಿದೆ ಎಂಬುದನ್ನು ಕಾಂಗ್ರೆಸ್ ಶಾಸಕರೇ ಜನರ ಮುಂದೆ ಇಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಿಂದ ನಿರ್ಗಮಿಸಿದಾಗ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಆದರೆ, ಕಳೆದ ೧ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಒಂದು ಕಡೆ ಭ್ರಷ್ಟಾಚಾರ,ಮತ್ತೊಂದು ಕಡೆ ಆರ್ಥಿಕ ನಿರ್ವಹಣೆಯ ವೈಫಲ್ಯದಿಂದ ರಾಜ್ಯದ ಜನ ಬೆಲೆ ತೆರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.