ತೈಲ ಗ್ರಾಹಕರ ಪಟ್ಟಿಯಲ್ಲಿ ದೇಶಕ್ಕೆ 3ನೇ ಸ್ಥಾನ

ನವದೆಹಲಿ, ಏ.೧೧- ಭಾರತದಲ್ಲಿ ಇಂಧನ ಬಳಕೆ ಕಳೆದ ಮಾರ್ಚ್‌ನಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕರು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
ಭಾರತದಲ್ಲಿ ತೈಲದ ಬೇಡಿಕೆ ಹಾಗೂ ಬಳಕೆಯೂ ಕಳೆದ ವರ್ಷಕ್ಕಿಂತಲೂ ಶೇ.೫% ರಷ್ಟು ಏರಿಕೆಯಾಗಿದ್ದು, ದಿನಕ್ಕೆ ೪.೮೩ ದಶಲಕ್ಷ ಬ್ಯಾರೆಲ್‌ಗಳಿಗೆ (೨೦.೫ ಮಿಲಿಯನ್ ಟನ್‌ಗಳು) ಏರಿಕೆಯಾಗಿದೆ. ಈ ಮಾಹಿತಿ ಭಾರತೀಯ ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಚ್ಚಾ ತೈಲ ವಿಶ್ಲೇಷಕ ವಿಕ್ರೋಟ್ ಕಾಟ್ರೊನಾ, ಇಂಧನ ಬಳಕೆ ಭಾರತದ ದೃಢವಾದ ಆರ್ಥಿಕ ಬೆಳವಣಿಗೆಯ ಪ್ರತಿಬಿಂಬವಾಗಿದೆ. ಜತೆಗೆ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ ಎಂದರು.
ಫೆಬ್ರವರಿಯಿಂದ ಎಲ್ಲಾ ವಿಧದ ಮಾರಾಟವು ಶೇ.೧೬.೫% ರಷ್ಟು ಜಿಗಿದಿದೆ. ಆದರೆ ಜೆಟ್ ಇಂಧನ ಮಾರಾಟವು ೧೦.೪% ಕ್ಕಿಂತ ಹೆಚ್ಚು ಏರಿಕೆಯಾಗಿ ೦.೬೯ ಮಿಲಿಯನ್ ಟನ್‌ಗಳಿಗೆ ಹೋಗಿದೆ. ಹಾಗೇ, ಡೀಸೆಲ್ ಮಾರಾಟವು ೧೧.೪% ರಿಂದ ೭.೮೦ ದಶಲಕ್ಷ ಟನ್‌ಗಳಿಗೆ ಏರಿದೆ ಎಂದು ಅವರು ವಿವರಿಸಿದರು.
ವಾರ್ಷಿಕ ಆಧಾರದ ಮೇಲೆ, ಗ್ಯಾಸೋಲಿನ್ ಅಥವಾ ಪೆಟ್ರೋಲ್ ಮಾರಾಟವು ಮಾರ್ಚ್‌ನಲ್ಲಿ ಶೇ.೬.೮% ರಿಂದ ೩.೧ ಮಿಲಿಯನ್ ಟನ್‌ಗಳಿಗೆ ಏರಿದೆ. ಆದರೆ ಅಡುಗೆ ಅನಿಲ ಅಥವಾ ದ್ರವೀಕೃತ ಪೆಟ್ರೋಲಿಯಂ ಅನಿಲ ಮಾರಾಟವು ೨.೭% ರಷ್ಟು ಕುಸಿದು ೨.೪೧ ಮಿಲಿಯನ್ ಟನ್‌ಗಳಿಗೆ ತಲುಪಿದೆ.
ತೈಲ ಮಾರುಕಟ್ಟೆ ವಿಶ್ಲೇಷಕ ಸುಗಂಧಾ ಸಚ್‌ದೇವ ಮಾತನಾಡಿ, ಸರ್ಕಾರದ ಬಂಡವಾಳ ವೆಚ್ಚದ ಹಂಚಿಕೆಯಿಂದ ಒಟ್ಟಾರೆ ಇಂಧನ ಬಳಕೆಯ ಹೆಚ್ಚಾಗಿದೆ.ಅಂದರೆ ನಿರ್ಮಾಣ ಮತ್ತು ಮೂಲಭೂತ (ರಚನೆ) ಗೆ ಹೆಚ್ಚಿನ ಬೇಡಿಕೆಯು ತೈಲ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗುತ್ತದೆ ಎಂದರು.
ಇನ್ನೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯು ಪ್ರವರ್ಧಮಾನಕ್ಕೆ ಬರುತ್ತಿರುವ ವಿಮಾನ ಪ್ರಯಾಣದ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿರುವುದರಿಂದ ವಿಮಾನ ನಿಲ್ದಾಣಗಳು, ವಿಮಾನಗಳು ಮತ್ತು ನೇಮಕಾತಿಗಳಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುವ ಯೋಜನೆಗಳನ್ನು ಭಾರತ ಮಾರ್ಚ್‌ನಲ್ಲಿ ಕೈಗೆತ್ತಿಕೊಂಡಿರುವುದು ತೈಲ ಬಳಕೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.