
ಲಂಡನ್, ಜು.೬- ಸದ್ಯ ಇಂಧನ ಕ್ಷೇತ್ರದಲ್ಲಿನ ಅನಿಶ್ಚಿತತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಇಂಧನ ಕ್ಷೇತ್ರದ ಜಗತ್ತಿನ ದೈತ್ಯ ಕಂಪೆನಿಗಳಲ್ಲಿ ಒಂದಾಗಿರುವ ಶೆಲ್ ಎಚ್ಚರಿಕೆ ನೀಡಿದೆ.
ತೈಲ ಮತ್ತು ಅನಿಲ ಉತ್ಪಾದನೆಯನ್ನು ಕಡಿತಗೊಳಿಸುವುದು ತೀರಾ ಅಪಾಯಕಾರಿ ಮತ್ತು ಬೇಜವಾಬ್ದಾರಿ ಕ್ರಮ ಎಂದು ಶೆಲ್‌ನ ಮುಖ್ಯಸ್ಥ ವಾಲ್ ಸಾವನ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸದ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಜಗತ್ತು ಅಷ್ಟೊಂದು ಹೇಳಿಕೊಳ್ಳುವಂಥ ರೀತಿಯಲ್ಲಿ ಪ್ರಗತಿ ಸಾಧಿಸಲಾಗಿಲ್ಲ. ಹಾಗಾಗಿ ಜಗತ್ತಿಗೆ ಈಗಲೂ ತೈಲ ಹಾಗೂ ಅನಿಲದ ಅಪಾರ ಅಗತ್ಯವಿದೆ. ಅದರಲ್ಲೂ ಚೀನಾದಲ್ಲಿ ಇತ್ತೀಚಿಗಿ ಇಂಧನ ಬೇಡಿಕೆ ನಿರಂತರವಾಗಿ ಏರುತ್ತಿದ್ದು, ಇದರ ಜೊತೆಗೆ ಯುರೋಪ್ ರಾಷ್ಟ್ರಗಳಲ್ಲಿ ಶೀತ ವಾತಾವರಣದಿಂದ ಕೂಡಿದ್ದು, ಹಾಗಾಗಿ ಇಂಧನ ಹಾಗೂ ಅನಿಲಕ್ಕಾಗಿ ಬೇಡಿಕೆ ಮತ್ತಷ್ಟು ಏರಿಕೆಯಾಗಿ ಅಂತಿಮವಾಗಿ ಬೆಲೆಯಲ್ಲಿ ಪರಿಣಾಮ ಬೀರಲಿದೆ. ಕಳೆದ ವರ್ಷ ಅನಿಲ ಹಾಗೂ ಇಂಧನ ಕೊರತೆಯ ಹಿನ್ನೆಲೆಯಲ್ಲಿ ಎಲ್ಲಾ ಪೂರೈಕೆಗಳನ್ನು ಯುರೋಪ್‌ಗೆ ಮಾಡಲಾಗಿದ್ದು, ಇದರಿಂದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಂಥ ಬಡರಾಷ್ಟ್ರಗಳು ತೀರಾ ಸಮಸ್ಯೆ ಎದುರಿಸಿದ್ದವು. ವಿಶ್ವದ ಎಲ್‌ಎನ್‌ಜಿ ಪೂರೈಕೆಯ ಬಹುಪಾಲನ್ನು ಯುರೋಪ್ ರಾಷ್ಟ್ರಗಳು ತೆಗೆದುಕೊಂಡ ಹಿನ್ನೆಲೆಯಲ್ಲಿ ಬಡರಾಷ್ಟ್ರಗಳ ಜನತೆ ವಿದ್ಯುತ್ ಕೊರತೆಯನ್ನು ಎದುರಿಸದ್ದರು ಎಂದು ಅವರು ತಿಳಿಸಿದರು.