ತೇರದಾಳ ಒಮ್ಮತ ಅಭ್ಯರ್ಥಿ ಆಯ್ಕೆ

ಬೆಂಗಳೂರು,ಮಾ.೧೫:ಚುನಾವಣೆಗೆ ಬಿಜೆಪಿಗೆ ಪ್ರತಿ ಕ್ಷೇತ್ರದಲ್ಲೂ ಟಿಕೆಟ್ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎಲ್ಲರ ಜತೆ ಚರ್ಚಿಸಿ ಒಬ್ಬರನ್ನು ಅಭ್ಯರ್ಥಿಯನ್ನಾಗಿಸಿ ಗೆಲುವಿಗೆ ಒಗ್ಗೂಡಿ ಕೆಲಸ ಮಾಡುವಂತೆ ವರಿಷ್ಠರು ಸೂಚನೆ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬಾಗಲಕೋಟೆಂiiಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಕ್ಷೇತ್ರದಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಯಾವುದೇ ಗೊಂದಲ ಉಂಟಾಗದಂತೆ ಅಭ್ಯರ್ಥಿ ಆಯ್ಕೆಯಾಗಲಿದೆ ಎಂದರು.
ತೇರಾದಾಳ ಕ್ಷೇತ್ರಕ್ಕೆ ಶಾಸಕ ಸಿದ್ದುಸವದಿಯೇ ಅಭ್ಯರ್ಥಿ ಎಂದು ಬಾಯಿತಪ್ಪಿ ಹೇಳಿದ್ದೇನೆ. ಅಭ್ಯರ್ಥಿ ಆಯ್ಕೆಯನ್ನು ಪಕ್ಷದ ಚುನಾವಣಾ ಸಮಿತಿ ಅಂತಿಮಗೊಳಿಸುತ್ತದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ, ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದರು.
ಸಚಿವ ಸೋಮಣ್ಣ ಅವರ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪರವರು, ಸೋಮಣ್ಣರವರಿಗೆ ಯಾವುದೇ ಅಸಮಾಧಾನವಿಲ್ಲ. ದೆಹಲಿಗೆ ಬೇರೆ ಕೆಲಸದ ಮೇಲೆ ಅವರು ಹೋಗಿದ್ದಾರೆ ಅಷ್ಟೇ ಎಂದರು.
ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ನಿರೀಕ್ಷೆ ಮೀರಿ ಜನರ ಸ್ಪಂದನೆ ವ್ಯಕ್ತವಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು. ಸುದ್ಧಿಗೋಷ್ಠಿಯಲ್ಲಿ ಸಚಿವ ಭೈರತಿ ಬಸವರಾಜು, ಶಾಸಕ ಚರಂತಿಮಠ ಉಪಸ್ಥಿತರಿದ್ದರು.