ತೇಜೋವಧೆ ಟ್ರೋಲ್ ಪೇಜ್ ವಿರುದ್ಧ ವಿನಯ್ ಗುರೂಜಿ ದೂರು

ಬೆಂಗಳೂರು, ಜು.೨೬- ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಅವರು ನನಗೆ ಟ್ರೋಲ್ ಪೇಜ್‌ಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳಿಂದ ತೇಜೋವಧೆ ಆಗಿದೆ ಎಂದು ಬನಶಂಕರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ವಿನಯ್ ಗುರೂಜಿ ಅವರು ದೂರು ಕೆಪಿಸಿಸಿ ಆನೇಕಲ್ ವಿಭಾಗ ಸೋಷಿಯಲ್ ಮೀಡಿಯಾ ವಿಂಗ್ ಸೇರಿ ಸುಮಾರು ೨೨ ಟ್ರೋಲ್ ಪೇಜ್‌ಗಳ ವಿರುದ್ಧ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ತಲೆಯ ಮೇಲೆ ಕಾಲಿಡುವ ದೃಶ್ಯವನ್ನು ಪೋಸ್ಟ್ ಮಾಡಿ ಅದರಲ್ಲಿ ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖವಾಗಿದೆ.
ಪೋಸ್ಟ್‌ನಲ್ಲಿ ಏನಿದೆ:
ರಾತ್ರಿ ಕುಡಿದ ಹೆಂಡದ ಅಮಲಿನಲ್ಲಿ ತಲೆಯ ಮೇಲೆ ಕಾಲಿಡುತ್ತಿರುವ ಗುರೂಜಿ, ನಶೆಯಲ್ಲಿ ನಿಲ್ಲೋಕೆ ಆಗುತ್ತಿಲ್ಲ. ಸಾಮಾನ್ಯ ಮನುಷ್ಯನಾಗಿ ಮೋಜು- ಮಸ್ತಿ ಮಾಡಿದರೂ ಯಾರೂ ಪ್ರಶ್ನಿಸಲ್ಲ. ಆದರೆ ತಾನು ದೇವರ ಅವತಾರ ಅಂತ ಬೊಗಳೆ ಬಿಟ್ಟು ಜನರ ಭಾವನೆ- ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ದೇವರುಗಳ ಮಾನಮರ್ಯಾದೆ ಹರಾಜು ಹಾಕುತ್ತಿರುವುದನ್ನು ಸಹಿಸುವುದು ಹೇಗೆ? ಇವನನ್ನು ದೇವನ ಅವತಾರ ಪುರುಷ ಅಂತ ಒಪ್ಪಿದರೆ, ದೇವರು ಹೆಂಡ ಕುಡಿತಾನೆ, ಹುಡುಗಿಯರ ಸಂಗ ಮಾಡುತ್ತಾನೆ, ಸಿಗರೇಟ್ ಹೊಡೆಯುತ್ತಾನೆ ಅಂತನೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿನಯ್ ಗುರೂಜಿ ವಿರುದ್ಧ ಪೋಸ್ಟ್ ಮಾಡಿದ್ದಾರೆ.
ಇಂತಹ ಪೋಸ್ಟ್‌ಗಳಿಂದ ಸ್ವಾಮೀಜಿಯವರ ತೇಜೋವಧೆ ಆಗಿದೆ. ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ, ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವ ಟ್ರೋಲಿಗರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಬನಶಂಕರಿ ಪೊಲೀಸರಿಗೆ ಮನವಿ ಮಾಡಿದ್ದಾರೆ.