ತೇಜಸ್ವಿ ಕಡಪಳ ನಿರ್ದೇಶಿಸಿದ ಕಿರುಚಿತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ


ಸುಳ್ಯ,ಜು.೧೮-ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದ ಪ್ರಧಾನ ಮಂತ್ರಿ ಆವಾಜ್ ಯೋಜನಾ ಇಲಾಖೆ ಏರ್ಪಡಿಸಿದ್ದ “ಖುಷಿಯೋಂಕಾ ಆಶಿಯಾನಾ” ಕಿರುಚಿತ್ರ ಸ್ಪರ್ಧೆಯಲ್ಲಿ ಸುಳ್ಯದ ತೇಜಸ್ವಿ ಕಡಪಳ ನಿರ್ಮಿಸಿ ನಿರ್ದೇಶಿಸಿದ್ದ ಕಿರುಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿದೆ.
ಪ್ರಧಾನಮಂತ್ರಿ ಆವಾಜ್ ಯೋಜನೆಯಲ್ಲಿ ನಗರ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಮನೆ ನಿರ್ಮಿಸಲು ಇಲಾಖೆ ಧನ ಸಹಾಯ ನೀಡುತ್ತದೆ. ಈ ಯೋಜನೆಯ ಫಲಾನುಭವಿಗಳ ಜೀವನ ಗಾಥೆಯನ್ನು ಆದರಿಸಿ ೩ ನಿಮಿಷಗಳ ಕಿರುಚಿತ್ರ ನಿರ್ಮಿಸಲು ರಾಷ್ಟ್ರ ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಯೋಜನೆಯ ಮೂಲಕ ಫಲಾನುಭವಿಗಳ ಜೀವನದಲ್ಲಿ ಆದ ಬದಲಾವಣೆಗಳು ಮತ್ತು ಮಹಿಳಾ ಸಬಲೀಕರಣವನ್ನು ಚಿತ್ರ ಪ್ರತಿಬಿಂಬಿಸಬೇಕಿತ್ತು. ಸ್ಪರ್ಧಾಳುಗಳಿಗೆ ತಮ್ಮ ಸಮೀಪದ ನಗರ ವ್ಯಾಪ್ತಿಯ ಫಲಾನುಭವಿಗಳ ಜೀವನದ ಬಗ್ಗೆ ಕಿರುಚಿತ್ರ ನಿರ್ಮಿಸಲು ಸೂಚಿಸಲಾಗಿತ್ತು.ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆಯ ಫಲಾನುಭವಿ ಕೇರ್ಪಳದ ವಿಮಲಾ ನಾರಾಯಣ ಅವರ ಜೀವನವನ್ನು ಆಧರಿಸಿ ತೇಜಸ್ವಿಯವರು ಈ ಕಿರುಚಿತ್ರವನ್ನು ನಿರ್ಮಿಸಿದ್ದರು. ವಿಮಲಾ-ನಾರಾಯಣ ದಂಪತಿಗಳು ಮತ್ತು ಅವರ ಮಕ್ಕಳಾದ ಸಾನ್ವಿ ಹಾಗೂ ತನ್ವಿ ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಸುಮಾರು ೨,೫೦೦ ಸ್ಪರ್ಧಾಳುಗಳು ತಮ್ಮ ಕಿರುಚಿತ್ರ ಗಳೊಂದಿಗೆ ಭಾಗವಹಿಸಿದ್ದರು.ಈ ಪೈಕಿ ೫೭೩ ಚಿತ್ರಗಳು ದ್ವಿತೀಯ ಹಂತಕ್ಕೆ ಪ್ರವೇಶ ಪಡೆದಿದ್ದವು. ಅಂತಿಮ ಹಂತಕ್ಕೆ ಪ್ರವೇಶ ಪಡೆದ ೧೯೫ ಕಿರುಚಿತ್ರಗಳಲ್ಲಿ ತೇಜಸ್ವಿ ಕಡಪಳ ನಿರ್ಮಿಸಿದ ಕಿರುಚಿತ್ರ ದ್ವಿತೀಯ ಬಹುಮಾನ ಗಳಿಸಿದೆ. ಕಿರಣ್ ಮಡಪ್ಪಾಡಿ ಕಿರುಚಿತ್ರದ ಛಾಯಾಗ್ರಾಹಕರಾಗಿ ಸಹಕರಿಸಿದ್ದರು. ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ರೂ ೧೫,೦೦೦.ನಗದು ಬಹುಮಾನವನ್ನು ಒಳಗೊಂಡಿದೆ.