ತೇಜಸ್ವಿಯಿಂದ ಯುವ ಸಮೂಹ ಪ್ರಭಾವಿತ

ವಿಜಯಪುರ.ಮಾ೨೧:ಪೂರ್ಣಚಂದ್ರ ತೇಜಸ್ವಿಯವರ ಬರಹಗಳಲಿದ್ದ ರೋಚಕತೆ ಮತ್ತು ಈ ನೆಲ ದ ಸೊಗಡಿನ ನೈಜತೆಯಿಂದಾಗಿ ಯುವಸಮೂಹ ಬಹಳ ದೊಡ್ಡ ಮಟ್ಟದಲ್ಲಿ ತೇಜಸ್ವಿಯವರ ಕಡೆಗೆ ಪ್ರಭಾವಿತಗೊಂಡರು ಎಂದು ಲೇಖಕ, ಶಿಕ್ಷಣ ತಜ್ಞ ಶ್ರೀನಿವಾಸ ಮೂರ್ತಿ ಎನ್ ಸಂಡ್ರಹಳ್ಳಿ ತಿಳಿಸಿದರು.
ಮಂಗಳವಾರದಂದು ಇವರು ಪಟ್ಟಣ ಸಮೀಪದ ಅಂಕತಟ್ಟಿ ಗೇಟ್ ಬಳಿ ಇರುವ ಎಸ್ ಎನ್ ಫಾರಂನಲ್ಲಿ ತೇಜಸ್ವಿ ಬಳಗ ಮತ್ತು ಅರಿವು ಸಾಂಸ್ಕೃತಿಕ ಕೇಂದ್ರದಿಂದ ಹಮ್ಮಿಕೊಂಡಿದ್ದ “ಬನ್ನಿ ತೇಜಸ್ವಿ ಜೊತೆ ಮಾತನಾಡೋಣ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತೇಜಸ್ವಿಯವರು ಅನುವಾದಿಸಿರುವ ಪ್ಯಾಪಿಲೋನ್ ಸರಣಿಯ ಕೃತಿಗಳಾಗಬಹುದು, ಕೆನೆತ್ ಅಂಡರ್ಸನ್ ರವರ ಬೇಟೆಯ ಕಥೆಗಳಾಗಬಹುದು ಅಥವಾ ಮಹಾ ಪಲಾಯನ ಕೃತಿ ಆಗಬಹುದು, ಇವು ಕನ್ನಡದ ಮೂಲ ಕೃತಿಗಳೇ ಎಂಬಷ್ಟರ ಮಟ್ಟಿಗೆ ನೈಜವಾಗಿವೆ. ತೇಜಸ್ವಿಯವರು ಕಾಡು ಮತ್ತು ನಾಡು ಎರಡನ್ನೂ ಅನುಭವಿಸಿ ಬರೆದ ಕಾರಣಕ್ಕಾಗಿ ಅವರ ಬರಹಗಳನ್ನು ಓದುವ ಬಹುದೊಡ್ಡ ವರ್ಗ ಸೃಷ್ಟಿಯಾಯಿತು. ಈ ವರ್ಗದಲ್ಲಿ ವಯಸ್ಸಿನ ಭೇದವಿಲ್ಲದೆ ಇರುವುದು ವಿಶೇಷ ಎಂದರು.
ತೋಟಗಾರಿಕೆ ತಜ್ಞ ಸಂತೆ ನಾರಾಯಣಸ್ವಾಮಿ ಮಾತನಾಡಿ, ತೇಜಸ್ವಿ ಅವರ ಪ್ರತಿಯೊಂದು ಕೃತಿಯು ಸಹ ಈ ನಾಡಿನ ಓದುಗರಿಗೆ ರೋಚಕ ಅನುಭವಕ್ಕೆ ಕೊಂಡಯುವಷ್ಟು ಪ್ರಭಾವಶಾಲಿಯಾಗಿದೆ ಎಂದರು. ತೇಜಸ್ವಿ ಅವರು ಯಾವುದೇ ಪ್ರಶಸ್ತಿ ಅಥವಾ ಪ್ರಚಾರಗಳ ಅಮಿಷಕ್ಕೆ ಬಲಿಯಾಗದೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ ಕಥೆಗಾರ, ಕಾದಂಬರಿಕಾರ, ಅಂಕಣಕಾರ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಕೃಷಿಕ ಮತ್ತು ವಿಶಿಷ್ಟ ಚಿಂತಕರಾಗಿದ್ದರು ಎಂದು ಅವರು ಬಣ್ಣಿಸಿದರು
ಪ್ರಗತಿಪರ ಚಿಂತಕ ದಾಸನಹಳ್ಳಿ ಪಟೇಲರು ಮಾತನಾಡಿ, ತೇಜಸ್ವಿಯವರು ಶ್ರಮಿಕರ ಬದುಕನ್ನು ತಮ್ಮ ಸಾಹಿತ್ಯದಲ್ಲಿ ಪ್ರಭಾವಶಾಲಿಯಾಗಿ ಕಟ್ಟಿಕೊಟ್ಟರು ಎಂದರು. ಲೋಹಿಯವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಇವರು ಸಮಾಜವಾದಿ ತತ್ವಗಳನ್ನು ಮೈಗೂಡಿಸಿಕೊಂಡಿದ್ದ ಒಬ್ಬ ಅಪ್ಪಟ ಸಮಾಜವಾದಿ ಎಂದು ತಿಳಿಸಿದರು.
ಸಂಪತ್ ಕುಮಾರ್,ನರಸಿಂಹ ರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್, ಶಿವಕುಮಾರ್, ರೈತ ಮುನಿರಾಜು ಮತ್ತಿತರರು ಭಾಗವಹಿಸಿದ್ದರು.