ತೇಗಲತಿಪ್ಪಿಯವರ ವಿರುದ್ಧ ಮಾಡಿರುವ ಆರೋಪಗಳು ಸೂರ್ಯನ ಬೆಳಕಿನಷ್ಟೇ ಸತ್ಯ: ಪ್ರೊ. ಯಶವಂತರಾಯ ಅಷ್ಠಗಿ

ಕಲಬುರಗಿ:ಮಾ.24:ಹಿರಿಯ ಸಾಹಿತಿಗಳು, ಬರಹಗಾರರು, ಚಿಂತಕರು ಹಾಗೂ ಕನ್ನಡಾಭಿಮಾನಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ದೂರವಿಟ್ಟು ಯಾವ ಪುರುಷಾರ್ಥಕ್ಕಾಗಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಯವರು ಅರ್ಥವಿಲ್ಲದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು,
ಕವಿಗಳಿಗೆ, ಸಾಹಿತಿಗಳಿಗೆ ಹಾಗೂ ಶಿಕ್ಷಕರಿಗೆ ಯಾವುದೇ ರೀತಿಯ ಸನ್ಮಾನ ಗೈಯದೆ, ಅವಮಾನಿಸುವಂತಹ ಘಟನೆಗಳಿಗೆ ಕಾರಣವಾಗುವ ಇವರ ನೇತೃತ್ವದ ಸಮ್ಮೇಳನಗಳು ಸ್ವಪ್ರತಿಷ್ಠೆ ಮತ್ತು ವೈಯಕ್ತಿಕ ಹಿತಾಸಕ್ತಿ ಮೆರೆಯುವ ಸಾಧನೆಗಳಾಗಿ ಮೂಡಿ ಬರುತ್ತಿರುವುದು ಜಿಲ್ಲೆಯ ಸಾಂಸ್ಕೃತಿಕ ಹಾಗೂ ಸಾಹಿತ್ಯ ಲೋಕದ ಜನತೆಗೆ ಗೊತ್ತಿರುವ ಸಂಗತಿಯಾಗಿದೆ. ಆದ್ದರಿಂದ ತೇಗಲತಿಪ್ಪಿ ಅವರ ಕುರಿತು ನಾನು ಮಾಡಿರುವ ಎಲ್ಲಾ ಆರೋಪಗಳು ಸೂರ್ಯನ ಬೆಳಕಿನಷ್ಟೇ ಸತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ಚಿಂತಕ ಪ್ರೊ.ಯಶವಂತರಾಯ ಅಷ್ಠಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಆರೋಪಗಳಿಗೆ ಬೆಂಬಲಿಸಿ ಹಾಗೂ ತೇಗಲತಿಪ್ಪಿ ಯವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಜಿಲ್ಲಾ ಕಸಾಪ ಸಹ ಕಾರ್ಯದರ್ಶಿಗಳು ಹಾಗೂ ಹಿರಿಯ ಸಾಂಸ್ಕೃತಿಕ ಸಂಘಟಕರಾದ ನಾಗಣ್ಣ ರಾಂಪುರೆ ಅವರು ರಾಜೀನಾಮೆ ಕೊಟ್ಟಿರುವುರುವವುದೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಪ್ರೊ ಅಷ್ಠಗಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನೊಬ್ಬನೇ ಅಧಿಪತಿ ಉಳಿದ ಎಲ್ಲಾ ಪದಾಧಿಕಾರಿಗಳು ಹೆಸರಿಗೆ ಮಾತ್ರ ಎಂಬಂತೆ ವರ್ತಿಸುತ್ತಿರುವ ತೇಗಲತಿಪ್ಪಿ ಯವರು ತಮ್ಮ ಅಹಂಕಾರವನ್ನು ತೊರೆದು ಎಲ್ಲರೂ ಸೇರಿ ಕನ್ನಡ ಕಟ್ಟುವ ಕೆಲಸ ಮಾಡಿದರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತ ವಾಗುತ್ತದೆ ಎಂಬ ಪರಮ ಸತ್ಯ ಅಧಿಕಾರದ ಅಮಲಿನಲ್ಲಿರುವ ತೇಗಲತಿಪ್ಪಿ ಯವರಿಗೆ ಅರ್ಥವಾಗದಿರುವುದು ಕಲಬುರಗಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತಿದೆ.

ಸ್ನಾತಕೋತ್ತರ ಪದವೀಧರನಾದ ನನಗೆ ಗಿಳಿಪಾಠದಂತೆ ಕೇವಲ ಆಶಯ ನುಡಿಗಳನ್ನಾಡುವ, ತೇಗಲತಿಪ್ಪಿ ಯವರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳು ಹಾಗೂ ನಿಯಮಾವಳಿಗಳನ್ನು (ಬೈಲಾ) ಅರ್ಥಮಾಡಿಕೊಳ್ಳದಷ್ಟು ಶೈಕ್ಷಣಿಕ ಬಡತನ ನನಗೆ ಬಂದಿಲ್ಲವೆಂದು ತೇಗಲತಿಪ್ಪಿ ಯವರಿಗೆ ಪ್ರೊ ಅಷ್ಠಗಿ ಎದಿರೇಟು ನೀಡಿದ್ದಾರೆ.

ಬಾಡಿಗೆ ಮನೆಯವರಿಗೂ ಕೂಡ ಮುಂಚಿತವಾಗಿ ನೋಟಿಸ್ ಕೊಡದೆ ಮನೆಯನ್ನು ಬಿಡಿಸುವಂತಿಲ್ಲ ಎಂಬ ಕಾನೂನು ದೇಶದಲ್ಲಿ ಇರುವಾಗ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ನನ್ನನ್ನು ಏಕಾಏಕಿ ಯಾವುದೇ ನೋಟಿಸ್ ನೀಡದೆ,ಬದಲಾಯಿಸಲಾಗದು ಎಂಬ ಕನಿಷ್ಠ ಕಾನೂನು ಪ್ರಜ್ಞೆ ಇಲ್ಲದಿರುವುದು ತೆಗಲತಿಪ್ಪಿ ಅವರ ಬೌದ್ಧಿಕ ಮಟ್ಟ ಎಷ್ಟು ಎಂಬುದು ತಿಳಿಸಿಕೊಡುತ್ತದೆ.

ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ, ವಿನಾಕಾರಣ ಪದಾಧಿಕಾರಿಗಳನ್ನು ಬದಲಾಯಿಸಬೇಕೆನ್ನುವ ಇವರ ಉದ್ದೇಶದ ಹಿಂದಿನ ಮರ್ಮವೇನು? ಎಂಬುದು ಜಿಲ್ಲೆಯ ಸಾಂಸ್ಕೃತಿಕ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಎರಡುವರೆ ವರ್ಷಗಳಿಂದ ತಮ್ಮ ಸರ್ವಾಧಿಕಾರಿ ಧೋರಣೆ ಅರ್ಥವಾಗಿಲ್ಲವೇ?
ಎಂದು ತೇಗಲತಿಪ್ಪಿ ಯವರು ಕೇಳಿರುವುದು ಹಾಸ್ಯಾಸ್ಪದವಾಗಿದೆ.
ಏಕೆಂದರೆ ಸ್ವಾರ್ಥ ಸಾಧನೆಗಾಗಿ ಜನರನ್ನು ಬಳಸಿಕೊಳ್ಳುವ ತೇಗಲತಿಪ್ಪಿ ಅವರ ಧೋರಣೆ ಅರ್ಥಮಾಡಿಕೊಳ್ಳದಷ್ಟು ದಡ್ಡನಾನಲ್ಲ, ಸಾಹಿತಿಕ ಸಾಂಸ್ಕೃತಿಕ ಕ್ಷೇತ್ರದ ಕೇಂದ್ರ ಸ್ಥಾನವಾದ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹಾಗೂ ಗೌರವ ಕಾಪಾಡುವ ದೃಷ್ಟಿಯಿಂದ ಪ್ರಾಮಾಣಿಕವಾಗಿ ಮತ್ತು ಸಕ್ರಿಯವಾಗಿ ಕನ್ನಡಮ್ಮನ ಸೇವೆಯನ್ನು ಮಾಡುತ್ತಿದ್ದೇನೆ ಎಂಬುದಕ್ಕೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳೇ ಸಾಕ್ಷಿಯಾಗಿವೆ.
ನಾನು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ತೇಗಲತಿಪ್ಪಿ ಯವರ ಆರೋಪ ಬಾಲಶತನದಿಂದ ಕೂಡಿದೆ.

ಸ್ವಾರ್ಥರಹಿತ ಸೇವೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿದ್ದೇನೆಯೇ ಹೊರತು, ಯಾವ ಪ್ರಚಾರದ ಗೀಳು ಫೋಟೋಗೆ ಫೋಸ್ ನೀಡುವಂತಹ ಜಾಯಮಾನ ನನ್ನದಲ್ಲ , ಹಲವಾರು ವರ್ಷಗಳಿಂದ ಸಾಮಾಜಿಕ ಹೋರಾಟ ಹಾಗೂ ಸೇವೆಯಲ್ಲಿ ತೊಡಗಿರುವ ನನಗೆ ತೇಗಲತಿಪ್ಪಿ ಯಂತಹ ಕುಟೀಲ ರಾಜಕೀಯ ಮನಸ್ಥಿತಿಯ ವ್ಯಕ್ತಿಯ ಪ್ರಮಾಣ ಪತ್ರದ ಅವಶ್ಯಕತೆ ಬೇಕಿಲ್ಲ.

ಬೇರೆಯವರ ಆಹ್ವಾನದ ಮೇರೆಗೆ ಕಲಬುರ್ಗಿ ನಗರಕ್ಕೆ ಬರುವ ಹೆಸರಾಂತ ಸಾಹಿತಿಗಳು, ಚಿತ್ರನಟರು, ರಾಜಕಾರಣಿಗಳು ಹಾಗೂ ಕಲಾವಿದರನ್ನು ಅವರಿಗೆ ಇಷ್ಟವಿಲ್ಲದಿದ್ದರೂ ಅವರ ಇಷ್ಟಕ್ಕೆ ವಿರುದ್ಧವಾಗಿ ಅವರಿದ್ದಲ್ಲಿಗೆ ಹೋಗಿ ಅವರಿಗೆ ದುಂಬಾಲು ಬಿದ್ದು, ಕೈ ಕಾಲು ಹಿಡಿದು ಅವರನ್ನು ಒಪ್ಪಿಸಿ ಕನ್ನಡ ಭವನಕ್ಕೆ ತಂದು ಪ್ರಚಾರ ಪಡೆಯುವ ಗೀಳು ಕಲಬುರ್ಗಿ ಜಿಲ್ಲೆಯಲ್ಲಿ ಕೇವಲ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಮಾತ್ರ ಇದೆ ಎಂಬ ಕಟುಸತ್ಯ ಜಿಲ್ಲೆಯ ಜನತೆಗೆ ತಿಳಿದಿದೆ.

ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎರಡೂವರೆ ವರ್ಷಗಳಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚಗಳ ಹಾಗೂ ಪರಿಷತ್ತಿನ ಸಭಾಗೃಹಗಳಿಗೆ ಸಂದಾಯವಾದ ಬಾಡಿಗೆ ಹಣದ ಕುರಿತು ಹಾಗೂ ಮೂರು ಜಿಲ್ಲಾ ಸಮ್ಮೇಳನಗಳ ಲೆಕ್ಕಪತ್ರದ ಕುರಿತು ಪಟ್ಟಿ ಬಿಡುಗಡೆ ಮಾಡುವಂತೆ ಹಾಗೂ ಈ ಕೂಡಲೇ ದಾನಿಗಳು ನಿರ್ಮಿಸಿ ಕೊಟ್ಟಿರುವ ಕೋಣೆಗೆ ಶ್ರೀವಿಜಯ ಸದನದ ಬದಲಾಗಿ ದಾನಿಗಳ ಹೆಸರು ಇಡುವಂತೆ ಚಿಂತಕರು ಹಾಗೂ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಯಶವಂತರಾಯ ಅಷ್ಠಗಿ ಯವರು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಯವರಿಗೆ ಮತ್ತೋಮ್ಮೆ ಆಗ್ರಹಿಸಿದ್ದಾರೆ.

ವಿಜಯಕುಮಾರ ತೇಗಲತಿಪ್ಪಿ ಯವರು ಕಳೆದ 20 ವರ್ಷಗಳಿಂದ ತಮ್ಮ ಹೊಟ್ಟೆಪಾಡಿಗಾಗಿ ಕಾರ್ಯಕ್ರಮಗಳೆಂಬ ದಾರಿ ಕಂಡುಕೊಂಡಿದ್ದಾರೆಯೇ ಹೊರತು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಇವರ ಕೊಡುಗೆ ಶೂನ್ಯ ಎಂಬುದನ್ನು ಜಿಲ್ಲೆಯ ಜನತೆ ಚೆನ್ನಾಗಿ ಅರಿತುಕೊಂಡಿದ್ದಾರೆ.

  • ಪ್ರೊ ಯಶವಂತರಾಯ ಅಷ್ಠಗಿ
    ಚಿಂತಕರು ಹಾಗೂ ಜಿಲ್ಲಾ ಗೌರವ ಕಾರ್ಯದರ್ಶಿಗಳು ಕಸಾಪ ಕಲಬುರಗಿ.