ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ


ಹೈದರಾಬಾದ್,ನ.೧೫- ಹೃದಯ ಸ್ತಂಭನಕ್ಕೆ ಒಳಗಾಗಿದ್ದ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು ಅವರ ತಂದೆ ಕೃಷ್ಣ.
ಹೃದಯ ಸ್ತಂಬನಕ್ಕೆ ಒಳಗಾಗಿದ್ದ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ೪ ಗಂಟೆಗೆ ಕೊನೆಯುಸಿರೆಳೆದರು. ಕೃಷ್ಣ ಅವರ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.
ನವೆಂಬರ್ ೧೪ ರಂದು, ಕೃಷ್ಣ ಅವರಿಗೆ ತೀವ್ರ ಹೃದಯ ಸ್ತಂಭನ ಸಂಭವಿಸಿತು ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಹೈದರಾಬಾದ್‌ನಲ್ಲಿರುವ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಿ ೨೦ ನಿಮಿಷಗಳ ಸಿಪಿಆರ್ ಮಾಡಿದ ನಂತರ ಅವರು ಚೇತರಿಸಿಕೊಂಡಿದ್ದರು. ಮತ್ತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿಲ್ಲ.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ತೆಲುಗಿನ ದಿಗ್ಗಜ ನಟ ಇಂದು ಇಹಲೋಕ ತ್ಯಜಿಸಿದ್ದಾರೆ. ಇಡೀ ತೆಲುಗು ಚಿತ್ರರಂಗವೇ ಸೂಪರ್ ಸ್ಟಾರ್ ಕೃಷ್ಣ ಅವರ ಅಗಲಿಕೆಗೆ ಶೋಕ ವ್ಯಕ್ತಪಡಿಸುತ್ತಿದೆ. ಅಂತ್ಯಕ್ರಿಯೆ ನಡೆಸುವ ಕುರಿತು ಕುಟುಂಬ ಸದಸ್ಯರು ಶೀಘ್ರ ನಿರ್ಧಾರ ಪ್ರಕಟಿಸಲಿದ್ದಾರೆ.
ಘಟ್ಟಮನೇನಿ ಶಿವರಾಮ ಕೃಷ್ಣ ಮೂರ್ತಿ ಅಲಿಯಾಸ್ ಕೃಷ್ಣ ಅವರು ಘಟ್ಟಮನೇನಿ ರಾಘವಯ್ಯ ಚೌಧರಿ ಮತ್ತು ನಾಗರತ್ನಮ್ಮ ದಂಪತಿಗಳಿಗೆ ೧೯೪೩ ರ ಮೇ.೩೧ ರಂದು ಜನಿಸಿದ್ದರು.
೩೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ:
ಕೃಷ್ಣ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಪ್ರಧಾನವಾಗಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದರು. ಐದು ದಶಕಗಳ ವೃತ್ತಿಜೀವನದಲ್ಲಿ ಅವರು ೩೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಸೂಪರ್ ಸ್ಟಾರ್ ಎಂದು ಕರೆಯುತ್ತಿದ್ದರು.
ಕೃಷ್ಣ ಅವರು ಇಂದಿರಾದೇವಿಯನ್ನು ವಿವಾಹವಾದ ನಂತರ ವಿಜಯ ನಿರ್ಮಲಾ ಅವರನ್ನು ವಿವಾಹವಾಗಿದ್ದರು. ವಿಜಯ ನಿರ್ಮಲಾ ೨೦೧೯ ರಲ್ಲಿ ನಿಧನರಾದರೆ, ಇಂದಿರಾ ೨೦೨೨ ಕಳೆದ ಎರಡು ತಿಂಗಳ ಹಿಂದೆ ನಿಧನರಾಗಿದ್ದಾರೆ.
ಕೃಷ್ಣ ಅವರಿಗೆ ಐದು ಮಕ್ಕಳು ಅವರಲ್ಲಿ ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ. ಈ ಪೈಕಿ ರಮೇಶ್ ಬಾಬು ೨೦೨೨ ರ ಜನವರಿಯಲ್ಲಿ ನಿಧನರಾದರು.