ತೆಲುಗು ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಸೋಂಕು ದೃಢ


ಹೈದರಾಬಾದ್, ನ 9- ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ‘ಆಚಾರ್ಯ’ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಕೋವಿಡ್ ಪರೀಕ್ಷೆ ಒಳಗಾಗಿದ್ದ ಅವರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಈ ವಿಷಯವನ್ನು ಖುದ್ದು ಚಿರಂಜೀವಿ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಆಚಾರ್ಯ ಚಿತ್ರೀಕರಣ ಪ್ರಾರಂಭಿಸಬೇಕೆಂದು, ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ, ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.
ನನಗೆ ಯಾವುದೇ ರೀತಿಯ ಕೋವಿಡ್ ಲಕ್ಷಣಗಳು ಇಲ್ಲ. ತಕ್ಷಣವೇ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ಕಳೆದ 4-5 ದಿನಗಳಿಂದ ನನ್ನ ನಿಕಟ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ನನ್ನ ಆರೋಗ್ಯ ಪರಿಸ್ಥಿತಿ ಕುರಿತು ನಿಮ್ಮೊಂದಿಗೆ ಆಗಾಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಚಿರಂಜೀವಿ ಹೇಳಿದ್ದಾರೆ. ಮೂರು ದಿನಗಳ ಹಿಂದೆ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ ನೆರೆ ನಿಧಿಗೆ ದೇಣಿಗೆ ನೀಡಿದ್ದರು. ಅವರೊಂದಿಗೆ ತೆಲುಗು ಚಿತ್ರರಂಗದ ಮತ್ತೊಬ್ಬ ನಾಯಕ ನಟ ನಾಗಾರ್ಜುನ ಕೂಡಾ ಇದ್ದರು. ನಿನ್ನೆ ಟಿ ಆರ್ ಎಸ್ ಸಂಸದ ಸಂತೋಷ್ ಕುಮಾರ್, ಪುತ್ರ ರಾಮಚರಣ್ ಅವರೊಂದಿಗೆ ಸೆಲ್ಪಿ ತೆಗೆದುಕೊಂಡಿದ್ದರು