ತೆಲುಗು, ಇಂಗ್ಲಿಷ್ ನಾಮಫಲಕ ತೆರವುಗೊಳಿಸಲು ಒತ್ತಾಯ

ರಾಯಚೂರು,ನ.೧೧- ಜಿಲ್ಲೆಯಲ್ಲಿ ಇಂಗ್ಲೀಷ, ತೆಲುಗು ಸೇರಿ ಇತರೆ ಭಾಷೆಗಳ ಪ್ರಭಾವವನ್ನು ಕಡಿಮೆಗೊಳಿಸಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿತು.
ರಾಯಚೂರು ರೈಲ್ವೆ ನಿಲ್ದಾಣದಲ್ಲಿ ತೆಲುಗು ನಾಮಫಲಕಗಳನ್ನು ತೆಗೆದುಹಾಕಬೇಕು. ಜಿಲ್ಲೆಯಾದ್ಯಂತ ಇತರೆ ಭಾಷೆಗಳಲ್ಲಿರುವ ನಾಮಫಲಕಗಳನ್ನು ತೆಗೆದು ಹಾಕಿ ಕನ್ನಡದಲ್ಲಿ ದೊಡ್ಡದಾಗಿ ಬರೆಯಬೇಕು. ಕನ್ನಡ ಶಿಕ್ಷಣ ಮಾಧ್ಯಮವು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಮಾಧ್ಯಮವಾಗಬೇಕು. ಕನ್ನಡ ಮಾಧ್ಯಮ ಕಲಿತವರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗಬೇಕು ಮತ್ತು ಇತರ ಮಾಧ್ಯಮ ಕಲಿತವರಿಗೆ ಉದ್ಯೋಗ ಅವಕಾಶ ನೀಡಬಾರದು ಎಂದು ಆಗ್ರಹಪಡಿಸಿದರು.
ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರಿಗೆ ಕರ್ನಾಟಕದಲ್ಲಿ ಎಲ್ಲಾ ಹಂತಗಳಲ್ಲಿ ಉದ್ಯೋಗ ನೀಡಬೇಕು. ತಾಂತ್ರಿಕ ಹಾಗೂ ಉನ್ನತ ವಿದ್ಯೆ ಹೊಂದಿದವರು ಕನ್ನಡಿಗರೇ ಇರುವುದರಿಂದ ಪರರಾಜ್ಯದವರಿಗೆ ಅವಕಾಶ ನೀಡದೆ ಕನ್ನಡಿಗರಿಗೇ ನೇಮಕಾತಿ‌ ಮಾಡಬೇಕು. ಕನ್ನಡ ಮಾಧ್ಯಮ ಅನುಮತಿ ಪಡೆದು ಇಂಗ್ಲಿಷ್ ಶಾಲೆಗಳನ್ನು ನಡೆಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಗಡಿನಾಡಿನಲ್ಲಿ ಕನ್ನಡ ಶಿಕ್ಷಣ ಹೊಂದಿದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಹೊಂದಲು ಅವಕಾಶ ನೀಡಬೇಕು. ಕನ್ನಡದಲ್ಲಿ ಶಿಕ್ಷಣ ಹೊಂದಿದ ಗಡಿನಾಡ ಕನ್ನಡಿಗರಿಗೆ ಆಯಾ ರಾಜ್ಯದಲ್ಲಿ ಉದ್ಯೋಗವಕಾಶ ನೀಡಬೇಕು. ಕನ್ನಡ ಭಾಷೆ ಕನ್ನಡ ಭಾಷೆಯಾಗಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಗೌರವ ಅಧ್ಯಕ್ಷ ಬಶೀರ್ ಅಹ್ಮದ್ ಹೊಸಮನಿ, ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಹನುಮಂತ ಆಲೂರು, ಸಹಕಾರ್ಯದರ್ಶಿ ಅನಿಲ್ ಕುಮಾರ್, ಕೆ. ಗೋವಿಂದರಾಜು ವೀರಹನುಮಾನ್, ಈರಣ್ಣ ಬೆಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.