ತೆಲುಗಿನತ್ತ ಶೋಕಿವಾಲ..

ಕನ್ನಡದಲ್ಲಿ ಇತ್ತೀಚಿಗೆ ಬರುತ್ತಿರುವ ಚಿತ್ರಗಳು ಗಡಿಯಾಚೆ ಹೋಗುತ್ತಿವೆ. ಇದೀಗ ಅದರ ಸಾಲಿಗೆ “ ಶೋಕಿವಾಲ” ಹೊಸ ಸೇರ್ಪಡೆ.

ಕನ್ನಡದ ಜೊತೆಗೆ ತೆಲುಗಿನಲ್ಲಿ ಚಿತ್ರ ತೆರೆಯ ಮೇಲೆ ಬರಲಿದೆ.ಟಿ.ಆರ್ ಚಂದ್ರಶೇಖರ್ ನಿರ್ಮಾಣ ಮಾಡಿರುವ ಚಿತ್ರವನ್ನು ಇದೇ ಮೊದಲ ಬಾರಿಗೆ ನಿರ್ದೇಶಕ ಜಾಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಗ್ರಾಮೀಣ ಸೊಗಡಿನ ಕಥೆಯನ್ನು ಪಕ್ಕಾ ಪ್ರೇಮಕಥೆಯೊಂದಿಗೆ ಮನರಂಜನೆಯ ಹೂರಣ ತುಂಬಿ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ಮೊದಲ ಯತ್ನದಲ್ಲಿ ಭರ್ಜರಿಯಾಗಿ ಫೋರ್, ಸಿಕ್ಸರ್ ಬಾರಿಸಲು ಸಜ್ಜಾಗಿದ್ದಾರೆ.

ತೆಲುಗಿನಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನಿರ್ಮಾಪಕ ಚಂದ್ರಶೇಖರ್ ಚಿತ್ರವನ್ನು ಅಲ್ಲಿಯೂ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ “ಶೋಕಿವಾಲ” ತೆಲುಗು ಭಾಷೆಯಲ್ಲಿಯೂ ಕಮಾಲ್ ಮಾಡಲು ಮುಂದಾಗಿದೆ.

ಈ ಕುರಿತು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಜಾಕಿ, ಮೊದಲು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ರಾಮನವಮಿಗೆ ಟೀಸರ್ ಬಿಡುಗಡೆ ಮಾಡಿ ಆ ಬಳಿಕ, ಲಿರಿಕಲ್ ವಿಡಿಯೋ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ತೆಲುಗಿನಲ್ಲಿ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ತಮಿಳಿನ ಕಡೆಗೂ ಹೋಗುವ ಉದ್ದೇಶವಿದೆ. ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರವನ್ನು ಸಿದ್ದ ಮಾಡಿದ್ದೇವೆ ಎಂದರು.

ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿ ಬಂದಿರುವ 7 ನೇ ಚಿತ್ರ ಇದಾಗಿದೆ. ಚಿತ್ರದಲ್ಲಿ ಅಜಯ್ ರಾವ್, ಸಂಜನಾ ಆನಂದ್,ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಮುನಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ

ಅಂದಹಾಗೆ ಚಿತ್ರವನ್ನು ಮಾಗಡಿ,ಚೆನ್ನಪಟ್ಟಣ, ಮೈಸೂರು,ಬೆಂಗಳೂರು ಸೇರಿದಂತೆ ಮತ್ತಿತರಕ ಕಡೆ ಚಿತ್ರೀಕರಣ ಮಾಡಲಾಗಿದೆ.