ತೆಲಸಂಗ್ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

ಅಥಣಿ : ಜ.18:ತಾಲೂಕಿನ ತೆಲಸಂಗ್ ಹೋಬಳಿಯ ನಾಡ ಕಚೇರಿಗೆ ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿ, ನಿತೇಶ ಪಾಟೀಲ ಭೇಟಿ ನೀಡಿ ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿದರು. ಕಂದಾಯ ಇಲಾಖೆಯಿಂದ ಜನರಿಗೆ ದೊರೆಯುವ ಸವಲತ್ತುಗಳ ಕಾರ್ಯ ವೈಖರಿಯ ಮಾಹಿತಿ ಪಡೆದು ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು. ನಂತರ ಸಾರ್ವಜನಿಕರಿಗೆ ಕುಂದು ಕೊರತೆಗಳಿದ್ದರೆ ಹೇಳಿಕೊಳ್ಳಿ ಎಂದರು. ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳ ಅನುದಾನ ಇನ್ನೂ ಜಮೆ ಆಗಿಲ್ಲ. ಸ್ಥಳೀಯ ಅಧಿಕಾರಿಗಳಿಂದ ಈ ಸಮಸ್ಯೆ ಪರಿಹಾರವಾಗುತ್ತಿಲ್ಲವೆಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಪಿಡಿಒ ಅವರಿಂದ ಮಾಹಿತಿ ಪಡೆದು ಸಿಇಒ ಜತೆ ಮಾತನಾಡಿ ಸಮಸ್ಯೆ ನಿವಾರಣೆಯ ಭರವಸೆ ನೀಡಿದರು. 2019ರಲ್ಲಿನ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಬಂದಿಲ್ಲ. ದ್ರಾಕ್ಷಿ ಬೆಳೆ ಹಾನಿ ಮತ್ತು ವಿಮೆ ನೀಡುವಲ್ಲಿ ಇಲ್ಲಿನ ರೈತರಿಗೆ ಹೆಚ್ಚು ಅನ್ಯಾಯವಾಗಿದೆ. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟರು. ತಹಸೀಲ್ದಾರ್ ಸುರೇಶ ಮುಂಜೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ವಾಲಿ, ಉಪತಹಸೀಲ್ದಾರ್ ಎಂ.ಎಸ್.ಯತ್ನಟ್ಟಿ, ಗ್ರಾಪಂ ಪಿಡಿಒ ಬೀರಪ್ಪಾ ಕಡಗಂಜಿ, ಅಥಣಿ ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ ತೆಲಸಂಗ್ ಹೋಬಳಿಯ ಕಂದಾಯ ನಿರೀಕ್ಷಕ ಮುಬಾರಕ್ ಮುಜಾವರ, ಬಿ.ಜೆ.ಇರಕಾರ, ಸೇರಿದಂತೆ ಗ್ರಾಮಸ್ಥರು ಹಾಗೂ ಇತರರಿದ್ದರು.