ತೆಲಂಗಾಣ ಆರೋಗ್ಯ ಖಾತೆ ವಶಕ್ಕೆ ಪಡೆದ ಮುಖ್ಯಮಂತ್ರಿ ಕೆಸಿಆರ್

ಹೈದರಾಬಾದ್, ಮೇ.1- ತೆಲಂಗಾಣದಲ್ಲಿ ನಿತ್ಯ ಕೊರೋನೋ ಸೋಂಕು ಹೆಚ್ಚಾಗುತ್ತಿದ್ದರೂ ಆ ಕಡೆ ಗಮನ ಹರಿಸದೆ ಭೂ ಮಾಫಿಯಾ ಪ್ರಕರಣದಲ್ಲಿ ಹೆಸರು ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಎ.ರಾಜೇಂದ್ರ ನಿರ್ವಹಿಸುತ್ತಿದ್ದ ಖಾತೆಯನ್ನು ಮುಖ್ಯಮಂತ್ರಿ ಚಂದ್ರಶೇಖರ್ ತಮ್ಮ ವಶಕ್ಕೆ ಪಡೆದಿದ್ದಾರೆ.

ಎ.ರಾಜೇಂದ್ರ ನಿರ್ವಹಿಸುತ್ತಿದ್ದ ವೈದ್ಯಕೀಯ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಖಾತೆಯನ್ನು ಮುಖ್ಯಮಂತ್ರಿ ಕೆ.‌ಚಂದ್ರಶೇಖರ್ ರಾವ್ ಅವರು ಬದಲಾಯಿಸುವ ಮೂಲಕ ಸಚಿವರಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ಸಚಿವರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.

ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವ ಕೆ.ಚಂದ್ರಶೇಖರ್ ರಾವ್ ಅವರು, ಮೇದಕ್ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಶೀಘ್ರವೇ ವರದಿ ಕೊಡುವಂತೆ ಸೂಚಿಸಿದ್ದಾರೆ.

ಮೇದಕ್ ಜಿಲ್ಲೆಯ ಮಸೈಪೇಟೆಯಲ್ಲಿ ಭೂ ಮಾಫಿಯಾದಲ್ಲಿ ಸಚಿವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರು ಇಂತಹ ಕ್ರಮ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ‌ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.ಈ ಕಡೆ ಗಮನಹರಿಸುವುದು ಬಿಟ್ಟು ಸಚಿವರು ಭೂಮಾಫಿಯಾದ ಕಡೆ ಗಮನ ಹರಿಸಿದ್ದಾರೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸಚಿವ ರಾಜೇಂದರ್ ಅವರ ಬಳಿಯಿದ್ದ ಖಾತೆಯನ್ನು ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರಿಗೆ ವರ್ಗಾಯಿಸುವಂತೆ ಮುಖ್ಯಮಂತ್ರಿಗಳ ಕಚೇರಿ ಮಾಡಿದ ಶಿಫಾರಸ್ಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ