ತೆಲಂಗಾಣಾ ತುರ್ತು ಪಶು ಚಿಕಿತ್ಸಾ ಘಟಕದ ಅಧ್ಯಯನ ನಡೆಸಿರುವ ಸಚಿವ ಪ್ರಭು ಚವ್ಹಾಣ್

ಬೀದರ: ನ.24:ನೆರೆ ರಾಜ್ಯ ತೆಲಂಗಾಣದಲ್ಲಿ ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ವಿಶೇಷವಾದ ಯೋಜನೆ ರೂಪಿಸಿದ್ದು ಯೋಜನೆಯ ಅನುಷ್ಠಾನ ಹಾಗೂ ಕಾರ್ಯವೈಖರಿ ಮತ್ತು ಅಳವಡಿಸಿಕೊಂಡ ವಿಶಿಷ್ಟ ಮಾದರಿಯ ಪ್ರಾತ್ಯಕ್ಷಿಕೆಯನ್ನು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ನಾಳೆ ತೆಲಂಗಾಣ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ

ಕರ್ನಾಟಕದಲ್ಲಿ ಅನುಷ್ಠಾನಗೊಂಡ ಪಶು ಸಂಜೀವಿನಿ ಯೋಜನೆ ಮಾದರಿಯಲ್ಲಿ ತೆಲಂಗಾಣ ಜಾನುವಾರುಗಳಿಗೆ ಚಿಕಿತ್ಸೆಯ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಕರ್ನಾಟಕದ ಮಾದರಿ ಹಾಗೂ ತೆಲಂಗಾಣಾ ಮಾದರಿಯ ವಿಶೇಷತೆಯನ್ನು ಸಚಿವರು ಅಧ್ಯಯನ ಮಾಡಲಿದ್ದು ಅಲ್ಲಿನ ಪಶುಸಂಗೋಪನಾ ಅಧಿಕಾರಿಗಳೊಂದಿಗೆ ಸಹ ಚರ್ಚೆ ನಡೆಸಲಿದ್ದಾರೆ.

ತೆಲಂಗಾಣಾ ಸಹ ಪಶುಸಂಗೋಪನೆ ಇಲಾಖೆಯ ಬಲವರ್ಧನೆಗೆ ಮುಂದಾಗಿದ್ದು ಕರ್ನಾಟಕ ರಾಜ್ಯಕ್ಕಿಂತ ಹೇಗೆ ವಿಭಿನ್ನವಾಗಿ ಅಲ್ಲಿನ ಪಶುಸಂಗೋಪನೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಹಾಗೂ ಅವರು ಜಾನುವಾರುಗಳ ಚಿಕಿತ್ಸೆಗಾಗಿ ಸಂಚಾರಿ ವಾಹನವನ್ನು ಬಳಸಿಕೊಳ್ಳುವ ರೀತಿ ಕುರಿತು ಸಚಿವರು ತೆಲಂಗಾಣಾ ರಾಜ್ಯದ ಪಶುಸಂಗೋಪನೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 275 ಸಂಚಾರಿ ಪಶು ಶಸ್ತ್ರಚಿಕಿತ್ಸಾ ವಾಹನಗಳನ್ನು ಕೇಂದ್ರ ಕರ್ನಾಟಕಕ್ಕೆ ನೀಡುತ್ತಿದ್ದು, ಸದ್ಯದಲ್ಲೇ ತಾಲೂಕಿಗೊಂದು ಪಶು ಚಿಕಿತ್ಸಾ ವಾಹನ ದೊರೆಯಲಿದೆ.