ತೆಲಂಗಾಣದ ಒಂದೇ ಕುಟುಂಬದ ೨೨ ಮಂದಿಗೆ ಸೋಂಕು

ಹೈದರಾಬಾದ್ ಜನವರಿ ೨. ಒಂದೇ ಕುಟುಂಬದ ೨೨ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ತೆಲಂಗಾಣದ ಸೂರ್ಯಪೇಟೆ ಪಟ್ಟಣದಲ್ಲಿ ನಡೆದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ತಮ್ಮ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಡೀ ಕುಟುಂಬ ಹೋಗಿ ಬಂದ ನಂತರ ಪರೀಕ್ಷೆ ಮಾಡಿಸಿಕೊಂಡಾಗ ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ನಿನ್ನೆ ಹೇಳಿದ್ದಾರೆ.

ಇವರಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಂಡುಬಂದಿಲ್ಲ ಆದರೂ ಸೋಂಕಿರುವುದು ಪತ್ತೆಯಾಗಿದೆ ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾಕ್ಟರ್ ಹರ್ಷವರ್ಧನ್ ಅವರು ಹೇಳಿದ್ದಾರೆ.

ಎಲ್ಲರನ್ನೂ ಪ್ರತ್ಯೇಕ ವಾಸಕ್ಕೆ ಕಳುಹಿಸಿಕೊಡಲಾಗಿದ್ದು ತೀವ್ರ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ಕುರಿತು ವೈದ್ಯರು ಮತ್ತು ಇತರ ಸಿಬ್ಬಂದಿ ವಿಶೇಷ ನಿಗಾ ವಹಿಸಿದ್ದಾರೆ ಎಂದರು.

ಇವರ್ಯಾರು ವಿದೇಶ ಪ್ರವಾಸ ಕೈಗೊಂಡಿರುವ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು ಬ್ರಿಟನ್ನಲ್ಲಿ ರೂಪಾಂತರ ಕೋರೋಣ ವೈರಸ್ ಸೋಂಕು ಇವರಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಕುಟುಂಬದ ಸದಸ್ಯರ ಪೈಕಿ ಒಬ್ಬರಿಗೆ ಕ್ಷಯರೋಗ ತಗುಲಿದ್ದು ಅವರು ಆಗಿಂದಾಗೆ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೋಗಿಯೂ ಸಹ ಕುಟುಂಬದ ಇತರ ಸದಸ್ಯರೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ೩೮ ಮಂದಿಗೆ ಸೋಂಕು ಪರೀಕ್ಷೆಗೆ ಮಾಡಲಾಗಿದೆ. ಈ ಪೈಕಿ ೨೨ ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಕುಟುಂಬದ ಇಷ್ಟೊಂದು ಮಂದಿಗೆ ಸೋಂಕು ಪತ್ತೆಯಾಗಿರುವುದು ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲು ಎಂದವರು ಹೇಳಿದ್ದಾರೆ.