ತೆಲಂಗಾಣದಲ್ಲಿ ಮರ್ಯಾದಾ ಹತ್ಯೆ

ವಾರಂಗಲ್, ಡಿ. ೪- ತೆಲಂಗಾಣದ ವಾರಂಗಲ್ ಜಿಲ್ಲೆಯ ಪರ್ವತಗಿರಿ ಎಂಬಲ್ಲಿ ತಾಯಿಯೇ ಅಪ್ರಾಪ್ತ ಮಗಳನ್ನು ಕೊಂದಿದ್ದು, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ..
ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಅಪ್ರಾಪ್ತ ಮಗಳನ್ನು ತಾಯಿಯೇ ಮರ್ಯಾದೆಗೆ ಅಂಜಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಪರ್ವತಗಿರಿ ಎಂಬಲ್ಲಿ ನಡೆದಿದೆ.
ಪರ್ವತಗಿರಿಯ ಉಬ್ಬನಿ ಸಮ್ಮಕ್ಕ ಎಂಬಾಕೆಗೆ ಇಬ್ಬರು ಮಕ್ಕಳಿದ್ದು, ಮೊದಲನೇ ಮಗಳಿಗೆ ಮದುವೆ ಮಾಡಿದ್ದಳು. ಎರಡನೇ ಮಗಳು ಅಂಜಲಿ ೧೦ನೇ ತರಗತಿ ಓದುತ್ತಿದ್ದು, ಅದೇ ಗ್ರಾಮದ ಪ್ರಶಾಂತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ಹಲವು ಬಾರಿ ಅಂಜಲಿಗೆ ಎಚ್ಚರಿಕೆ ನೀಡಿದ್ದಳು. ಆದರೂ ಅಂಜಲಿ ತಾಯಿಯ ಮಾತನ್ನು ಕೇಳಿರಲಿಲ್ಲ. ತಮ್ಮ ಜಾತಿಗಿಂತ ಕೀಳುಜಾತಿಯ ವ್ಯಕ್ತಿಯನ್ನು ಅಂಜಲಿ ವಿವಾಹವಾದರೆ, ಮರ್ಯಾದೆ ಹೋಗುತ್ತದೆ ಎಂದು ಭಾವಿಸಿದ ಉಬ್ಬನಿ ಸಮ್ಮಕ್ಕ, ತನ್ನ ತಾಯಿ ಯಲ್ಲಮ್ಮಳ ಜೊತೆಗೂಡಿ, ನವೆಂಬರ್ ೧೯ರಂದು ಅಂಜಲಿ ಮಲಗಿದ್ದಾಗ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ.
ಘಟನೆಯ ನಂತರ ತನಿಖೆ ನಡೆಸಿದ ಪೊಲೀಸರು, ತೀವ್ರ ವಿಚಾರಣೆ ನಡೆಸಿದಾಗ ಅಂತರ್ಜಾತಿ ಪ್ರೇಮವನ್ನು ವಿರೋಧಿಸಿ ತಾನೇ ತನ್ನ ತಾಯಿಯ ಜೊತೆಗೂಡಿ ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ಉಬ್ಬನಿ ಸಮ್ಮಕ್ಕ ಅವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಆಕೆಯೇ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಳು.