ತೆಲಂಗಾಣದಲ್ಲಿ ಕೈಗೆ ಮೊದಲ ಗೆಲುವು ಬಿಆರ್‌ಎಸ್‌ಗೆ ಮುಖಭಂಗ

ಹೈದರಾಬಾದ್,ಡಿ.೩- ಅಪಾರ ಕುತೂಹಲ ಕೆರಳಿಸಿದ್ದ ಈ ಬಾರಿಯ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ತೆಲಂಗಾಣ ರಾಜ್ಯ ಹೋರಾಟಕ್ಕೆ ಶ್ರಮಿಸಿ ೧೦ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಚಂದ್ರಶೇಖರರಾವ್ ನೇತೃತ್ವದ ಭಾರತ ರಾಷ್ಟ್ರ ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಕಟ್ಟಿ ಹಾಕಲು ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿದ್ದು, ಈ ಮೈತ್ರಿಕೂಟವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಬಂಧ ಈ ಚುನಾವಣೆ ಪಕ್ಷದ ಪಾಲಿಗೆ ಸವಾಲಾಗಿ ಪರಿಣಮಿಸಿತ್ತು. ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡು ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಗಳ ಭರವಸೆಗಳ ಮಹಾಪೂರವನ್ನೇ ಹರಿಸಿದ್ದು, ಇದಕ್ಕೆ ಮತದಾರ ಪ್ರಭು ಕಾಂಗ್ರೆಸ್‌ಗೆ ಮುದ್ರೆ ಒತ್ತಿದ್ದಾನೆ.
ಬಹುತೇಕ ಕ್ಷೇತ್ರಗಳಲ್ಲಿ ಬಿಆರ್‌ಎಸ್ ಪಕ್ಷದ ಹುರಿಯಾಳುಗಳು ಹಿನ್ನಡೆ ಅನಿಭವಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿರುವ ತೆಲಂಗಾಣ ರಾಜ್ಯಘಟಕದ ಅಧ್ಯಕ್ಷ ರೇವಂತ್‌ರೆಡ್ಡಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಅವರ ಪುತ್ರ ರಾಮರಾವ್ ಹಿನ್ನಡೆ ಅನುಭವಿಸಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಮ್ಯಾಜಿಕ್ ಸಂಖ್ಯೆ ದೊರಕುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಕುಣಿದು ಕುಪ್ಪಳಿಸಿದರು ತಮ್ಮ ನೆಚ್ಚಿನ ನಾಯಕನ ಪರ ಘೋಷಣೆ ಕೂಗಿದರು.
ಸೇಡು ತೀರಿಸಿಕೊಂಡ ಕಾಂಗ್ರೆಸ್
ಅಖಂಡ ಆಂಧ್ರಪ್ರದೇಶವಿದ್ದಾಗ ತೆಲಂಗಾಣ ರಾಜ್ಯ ರಚನೆ ಮಾಡಿದರೆ ಆಗಿನ ಟಿಆರ್‌ಎಸ್ ಈಗಿನ ಬಿಆರ್‌ಎಸ್ ಅನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡುವುದಾಗಿ ಕಾಂಗ್ರೆಸ್ ನಾಯಕರಿಗೆ ಭರವಸೆ ನೀಡಿ, ರಾಜ್ಯ ರಚನೆ ಮಾಡುತ್ತಿದ್ದಂತೆ ಕಾಂಗ್ರೆಸ್‌ಗೆ ಕೈಕೊಟ್ಟಿದ್ದ ಕೆ. ಚಂದ್ರಶೇಖರ್ ರಾವ್ ಅವರ ವಿರುದ್ದ ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಂಗ್ರೆಸ್ ನಾಯಕರು ಎದುರು ನೋಡುತ್ತಿದ್ದರು.ವಿಧಾನಸಭೆ ಚುನಾವಣೆಯಲ್ಲಿ ಕೆ. ಚಂದ್ರಶೇಖರ್ ರಾವ್ ಅವರಿಗೆ ತೆಲಂಗಾಣದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.ತೆಲಂಗಾಣದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿದು ಹ್ಯಾಟ್ರಿಕ್ ಸಾಧಿಸಬೇಕು ಎನ್ನುವ ವಿಶ್ವಾಸದಲ್ಲಿದ್ದ ಬಿಆರ್‌ಎಸ್‌ಗೆ ಮುಖಭಂಗವಾಗಿದೆ.

ತೆಲಂಗಾಣ ಜನತೆಯ ಗೆಲುವು
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ತೆಲಂಗಾಣ ಜನತೆಯ ಗೆಲುವು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದ್ದಾರೆ.ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ರಕ್ಷಣೆಗಾಗಿ ಹೈದ್ರಾಬಾದ್‌ಗೆ ತೆರಳಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ತೆಲಂಗಾಣದ ಜನರು ಪ್ರತ್ಯೇಕ ರಾಜ್ಯ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಗೆ ಕೃತಜ್ಞತೆಯಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದು ಅವರು ಹೇಳಿದರು.