ತೆರಿಗೆ ಸ್ಲ್ಯಾಬ್ ಬದಲಾವಣೆಗೆ ಚಿಂತನೆ

ನವದೆಹಲಿ,ನ.೨೦- ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಮುಂದಿನ ವರ್ಷ ಜುಲೈ ತಿಂಗಳಿಗೆ ೫ ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಕೇಂದ್ರಸರ್ಕಾರ ನೀಡುತ್ತಿರುವ ಪರಿಹಾರ ಮುಕ್ತಾಯಗೊಳ್ಳಲಿದೆ.
ಹೀಗಾಗಿ ಜು. ೧, ೨೦೧೭ ರಂದು ಜಾರಿಗೊಳಿಸಿದ ಏಕ ತೆರಿಗೆಯ ಅತ್ಯಂತ ಸಮಗ್ರ ಬದಲಾವಣೆಯಲ್ಲಿ ತೆರಿಗೆ ಸ್ಲ್ಯಾಬ್ ಪುನಾರಚನೆ ಮತ್ತು ವಿನಾಯಿತಿಗಳನ್ನು ಕಡಿಮೆಗೊಳಿಸಲು ಕೇಂದ್ರಸರ್ಕಾರ ಚಿಂತನೆ ನಡೆಸಿದೆ.
ಈಗ ಜಿಎಸ್‌ಟಿ ಶೇ. ೫, ಶೇ. ೧೨, ಶೇ. ೧೮ ಒಟ್ಟು ಶೇ. ೨೮ ರಷ್ಟು ತೆರಿಗೆ ಸ್ಲ್ಯಾಬ್‌ಗಳಿವೆ. ಆದರೆ ಇದನ್ನು ೩ ಸ್ಲ್ಯಾಬ್‌ಗಳನ್ನು ಜಾರಿಗೆ ತಂದು ಸರಳೀಕರಣಗೊಳಿಸಿ ಆದಾಯವನ್ನು ಹೆಚ್ಚಿಸಲು ಕೇಂದ್ರಸರ್ಕಾರ ಮುಂದಾಗಿದೆ.
ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ತಂಡ ಶೀಘ್ರದಲ್ಲೇ ಸಭೆ ಸೇರಿ ನೂತನ ಜಿಎಸ್‌ಟಿ ಸ್ಲ್ಯಾಬ್‌ಗಳ ಶಿಫಾರಸ್ಸುಗಳನ್ನು ಅಂತಿಮಗೊಳಿಸಲಿದೆ. ಆನಂತರ ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
ಜಿಎಸ್‌ಟಿ ಜಾರಿಯಿಂದ ರಾಜ್ಯಗಳು ಅನುಭವಿಸುತ್ತಿರುವ ನಷ್ಟಗಳನ್ನು ಸರಿದೂಗಿಸಲು ಕೇಂದ್ರಸರ್ಕಾರ ಪರಿಹಾರ ನೀಡುತ್ತಿದ್ದು, ಇದು ೫ ವರ್ಷಗಳ ಅವಧಿಗೆ ಮಾತ್ರ ಅನ್ವಯವಾಗಲಿದ್ದು, ಮುಂದಿನ ವರ್ಷ ಅಂತ್ಯಗೊಳ್ಳಲಿದೆ. ಇದರಿಂದ ರಾಜ್ಯಗಳ ಆದಾಯದಲ್ಲಿ ಗಣನೀಯ ಇಳಿಕೆಯಾಗಲಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ.