ತೆರಿಗೆ ವ್ಯವಸ್ಥೆಯಲ್ಲಿ ಅಬಕಾರಿ ಕೊಡುಗೆ ಅನನ್ಯ

ಕಲಬುರಗಿ:ಫೆ.25: ಇಡೀ ದೇಶದ ನಾಗರಿಕರಿಂದ ತೆರಿಗೆಯನ್ನು ಸಂಗ್ರಹಿಸಿ, ತೆರಿಗೆ ಸೋರಿಕೆಯನ್ನು ತಡೆಗಟ್ಟಿ, ಸರ್ಕಾರಕ್ಕೆ ಬರಬೇಕಾದ ಆದಾಯವನ್ನು ದೊರಕಿಸಿಕೊಡುವ ಸೂಕ್ಷ್ಮವಾದ ಕೆಲಸವನ್ನು ಅಬಕಾರಿ ಇಲಾಖೆಯು ಮಾಡುತ್ತದೆ. ದೇಶದ ತೆರಿಗೆ ವ್ಯವಸ್ಥೆಯ ಸಫಲತೆಯಲ್ಲಿ ಅಬಕಾರಿ ಇಲಾಖೆಯ ಕೊಡುಗೆ ಅನನ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶ್ರೇಯಸ್ ಟ್ಯುಟೋರಿಯಲ್ಸ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಕೇಂದ್ರ ಅಬಕಾರಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಬಕಾರಿ ತೆರಿಗೆಯ ಸಂಗ್ರಹದಲ್ಲಿ ಇಲಾಖೆಯ ನೌಕರರ ಶ್ರಮ ಮರೆಯುವಂತಿಲ್ಲ. ತಮ್ಮ ಕಾರ್ಯದಿಂದ ಸ್ವಲ್ಪ ವಿಚಲಿತರಾದರೆ, ಸರ್ಕಾರದ ಬೊಕ್ಕಸಕ್ಕೆ ಅಪಾರವಾದ ಹಾನಿಯಾಗಿ, ರಾಷ್ಟ್ರದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಇಲಾಖೆ ಮತ್ತು ನೌಕರರ ಕಾರ್ಯವನ್ನು ಪ್ರಶಂಸಿಸುವ, ಗೌರವಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಫೆ.24ನ್ನು ‘ಕೇಂದ್ರ ಅಬಕಾರಿ ದಿನಾಚರಣೆ’ಯನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಸಯಯದ್ ಹಮೀದ್, ಸೋಹೆಲ್ ಶೇಖ್ ಸೇರಿದಂತೆ ಇನ್ನಿತರರಿದ್ದರು.