ತೆರಿಗೆ ವಂಚಿಸುವ ವೈಟ್ ಬೋರ್ಡ್ ಟ್ಯಾಕ್ಸಿಗಳ ಹಾವಳಿ ತಪ್ಪಿಸಲು ಆಗ್ರಹ

ತುಮಕೂರು, ನ. ೧೯- ಜಿಲ್ಲಾದ್ಯಂತ ವೈಟ್ ಬೊರ್ಡ್ ಟ್ಯಾಕ್ಸಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಡಿವಾಣ ಹಾಕುವಂತೆ ಹಳದಿ ಬೋರ್ಡ್ ವಾಹನಗಳಿಗೆ ಅನುಕೂಲ ಮಾಡಿಕೊಡುವಂತೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಶನ್ ವತಿಯಿಂದ ಜಿಲ್ಲಾಧಿಕಾರಿ, ಆರ್‍ಟಿಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೈಟ್ ಬೋರ್ಡ್ ಟ್ಯಾಕ್ಸಿ ವಾಹನದವರು ರಾಜಾರೋಷವಾಗಿ ಬಾಡಿಗೆ ಮಾಡುತ್ತಿರುತ್ತಾರೆ. ಸೆಲ್ಪ್ ಡ್ರೈವ್ ಚಾಲನೆಗೆ ಬಾಡಿಗೆಗೆ ನೀಡುತ್ತಿದ್ದಾರೆ. ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತದೆ. ಇದರಿಂದಾಗಿ ಸರ್ಕಾರಕ್ಕೆ ತೆರಿಗೆ ಕಟ್ಟಿ ಜೀವನ ಮಾಡುತ್ತಿರುವ ಹಳದಿ ಬೋರ್ಡ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗೆ ಅನ್ಯಾಯವಾಗುತ್ತಿದ್ದು, ಹಳದಿ ಬೋರ್ಡ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗೆ ಜೀವನ ನಡೆಸಲು ತುಂಬಾ ಕಷ್ಟಕರವಾಗುತ್ತಿದೆ. ಆದ್ದರಿಂದ ವೈಟ್ ಬೋರ್ಡ್ ಟ್ಯಾಕ್ಸಿಗಳ ಹಾವಳಿ ನಿಯಂತ್ರಿಸುವಂತೆ ಪದಾಧಿಕಾರಿಗಳಾದ ಯೋಗೀಶ್, ಮಹೇಶ್, ಮಂಜುನಾಥಸ್ವಾಮಿ, ಮಹೇಶ್ ಆಗ್ರಹಿಸಿದ್ದಾರೆ.
ವೈಟ್ ಬೋರ್ಡ್ ಟ್ಯಾಕ್ಸಿಗಳ ಹಾವಳಿ ಹೀಗೆ ಮುಂದುವರೆದರೆ ಹಳದಿ ಬೋರ್ಡ್ ಟ್ಯಾಕ್ಸಿ ಮಾಲೀಕರು ತೆರಿಗೆ ಕಟ್ಟುವ ಶಕ್ತಿಯನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ತಮ್ಮದೇ ಆದ ಸರ್ಕಾರಿ ಕಚೇರಿಗಳಲ್ಲಿಯೂ ಸಹ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನೇ ಬಳಸುತ್ತಿದ್ದಾರೆ. ಆದ್ದರಿಂದ ಕೂಡಲೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಲು ಕೂಡಲೇ ನಿಮ್ಮ ವ್ಯಾಪ್ತಿಯಲ್ಲಿ ತಂಡವನ್ನು ರಚಿಸಿ ಹಳದಿ ಬೋರ್ಡ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಜೀವನದಲ್ಲಿ ಆಟವಾಡುತ್ತಿರುವ ವೈಟ್‌ಬೋರ್ಡ್ ಟ್ಯಾಕ್ಸಿಗಳನ್ನು ಸರ್ಕಾರ ವಶಪಡಿಸಿಕೊಂಡು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಶನ್ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ವೈಟ್ ಬೋರ್ಡ್ ಟ್ಯಾಕ್ಸಿಗಳಿಂದ ವೈಟ್ ಬೋರ್ಡ್ ಟ್ಯಾಕ್ಸಿಯಲ್ಲಿ ಬಾಡಿಗೆಗೆ ಹೋಗಿ ಅಪಘಾತವಾದಲ್ಲಿ ವಿಮೆ ಸಿಗುವುದಿಲ್ಲ. ವೈಟ್ ಬೋರ್ಡ್ ಟ್ಯಾಕ್ಸಿಗಳಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟವಾಗುತ್ತದೆ. ಸಾರ್ವಜನಿಕರ ಜೀವದ ಜತೆ ಚೆಲ್ಲಾಟ, ಕಾನೂನು ಪ್ರಕಾರ ತೆರಿಗೆ ಕಟ್ಟಿ ಜೀವನ ನಡೆಸುತ್ತಿರುವ ಹಳದಿ ಬೋರ್ಡ್ ಟ್ಯಾಕ್ಸಿಯವರ ಅನ್ನವನ್ನು ಕಸಿಯುತ್ತಿರುವುದಲ್ಲದೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಖಂಡನೀಯ ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಶನ್ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಕಿಡಿಕಾರಿದ್ದಾರೆ.