ತೆರಿಗೆ ಪರಿಷ್ಕರಣೆ, ನಾಮಫಲಕ ಸ್ಥಳಾಂತರ, ಸ್ಮಶಾನದಲ್ಲಿ ಕಸ ಸದಸ್ಯರಿಂದ ಆಕ್ಷೇಪ

ಮೂಡುಬಿದಿರೆ, ಎ.೫-ಬಸ್‌ನಿಲ್ದಾಣದ ಪ್ರವೇಶ ದ್ವಾರದ ಬಳಿಯಿದ್ದ ಕವಿ ರತ್ನಾಕರವರ್ಣಿ ನಾಮಫಲಕಕಕ್ಕೆ ಅಡ್ಡವಾಗಿದ್ದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಸಿಬೇಕೆಂದು ತಾನು ಪುರಸಭೆಗೆ ಮನವಿ ಮಾಡಿದ್ದೆ. ಆದರೆ ಪುರಸಭೆಯವರು ಫ್ಲೆಕ್ಸ್ ತೆಗೆಯುವ ಬದಲು ನಾಮಫಲಕವನ್ನೆ ಸ್ಥಳಾಂತರಗೊಳಿಸದ್ದು ಯಾಕೆ, ಸ್ಥಳಾಂತರ ಮಾಡುವಾಗ ದೂರು ಕೊಟ್ಟ ನನ್ನ ಬಳಿ ಯಾಕೆ ಕೇಳಿಲ್ಲ ಎಂದು ಆಡಳಿತ ಪಕ್ಷದ ಸದಸ್ಯೆ ಶ್ವೇತಾ ಕುಮಾರಿ ಅವರು ಶನಿವಾರ ನಡೆದ ಪುರಸಭಾ ಮಾಸಿಕ ಸಭೆಯಲ್ಲಿ ಪ್ರಶ್ನಿಸಿದ್ದು ಸ್ವಲ್ಪ ಹೊತ್ತು ಮಾತಿನ ಚಕಾಮಕಿ ನಡೆಯಿತು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭಾಧಿವೇಶದಲ್ಲಿ ಮಾತನಾಡಿದ ಶ್ವೇತಾ ಅವರು ಕವಿ ರತ್ನಾಕರವರ್ಣಿ ಅವರ ನಾಮಫಲಕವನ್ನು ತೆಗೆದು ಮುಂದುಗಡೆ ಹಾಕಲಾಗಿದೆ ಆದರೆ ತಾನು ಫ್ಲೆಕ್ಸ್ ತೆಗೆಸುವಂತೆ ಹೇಳಿದ್ದು ಯಾರು ನಾಮಫಲಕವನ್ನು ತೆಗೆಯಲು ಹೇಳಿದ್ದು ತನ್ನ ಬಳಿ ಜೈನ ಸಮುದಾಯದವರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಅದೂ ವಾರ್ಡ್ ಸದಸ್ಯರ ಗಮನಕ್ಕೆ ಬಾರದೆ ತೆಗೆಯಲು ಕಾರಣವೇನೆಂದು ಮುಖ್ಯಾಧಿಕಾರಿಯವರನ್ನು ನೇರವಾಗಿ ಪ್ರಶ್ನಿಸಿದರು. ಹಿಂದೆ ಅಲ್ಲಿರುವ ನಾಮಫಲಕ ಯಾರಿಗೂ ಕಾಣುತ್ತಿರಲಿಲ್ಲ ಈಗ ಚೆನ್ನಾಗಿ ಕಾಣುತ್ತಿದೆ ಈ ಬಗ್ಗೆ ಜೈನ ಸಮುದಾಯದವರು ತನಗೆ ತುಂಬಾ ಮಂದಿ ಕರೆ ಮಾಡಿ ಪ್ರಶಂಶಿಸಿದ್ದಾರೆಂದು ತಾನು ಅದೇ ಸ್ಥಳದಲ್ಲಿ ಹಾಕಿರುವ ಫ್ಲೆಕ್ಸನ್ನು ತೆಗೆಯದಿರುವ ಸದಸ್ಯ ಕೊರಗಪ್ಪ ತಿಳಿಸಿದಾಗ ಇಬ್ಬರ ನಡುವೆ ಮಾತುಕತೆ ನಡೆಯಿತು. ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ಇಂದು ಎಂ ಅವರು ಮಾತನಾಡಿ ಆಗಿನ ಜೈನ್ ಮಿಲನ್ ಅಧ್ಯಕ್ಷರ ಸಲಹೆಯಂತೆ ನಾಮಫಲಕವನ್ನು ಸ್ಥಳಾಂತರಗೊಳಿಸಿದ್ದೇವೆ ಉತ್ತರಿಸಿದರು.
ಸರಕಾರದ ಸುತ್ತೋಲೆಯಂತೆ ಪುರಸಭೆಯ ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ ಪರಿಷ್ಕರಣೆ ಬಗ್ಗೆ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದಾಗ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷದ ಸದಸ್ಯರಾದ ಸುರೇಶ್ ಪ್ರಭು ಜನ ಕೊರೊನಾ ಸಂಕಷ್ಟದಲ್ಲಿದ್ದು ಕೈಯಲ್ಲಿ ಹಣ ಇಲ್ಲ. ಇಂತಹ ಕಷ್ಟಕಾಲದಲ್ಲಿ ತೆರಿಗೆ ಏರಿಗೆ ಮಾಡುವುದು ಬೇಡ. ಕಳೆದ ವರ್ಷ ಶೇ.೧೮ರಷ್ಟು ತೆರಿಗೆ ಏರಿಕೆ ಮಾಡಿದ್ದೀರಿ ಆದರೆ ನಿಮ್ಮ ಲೆಕ್ಕಾಚಾರದಲ್ಲಿ ಅದು ಶೇ ೫೦ರಷ್ಟು ಏರಿಕೆಯಾಗಿದೆ. ಜನರಿಗೆ ಉತ್ತರ ಕೊಡಬೇಕಾದವರು ನಾವು. ಹತ್ತಿರದ ಕಾರ್ಕಳ ಪುರಸಭೆಯಲ್ಲಿ ತೆರಿಗೆ ಪರಿಷ್ಕರಣೆ ಆಗಿಲ್ಲ. ನಮ್ಮ ಪುರಸಭೆಗೆ ಯಾಕೆ ಅವಸರ ಎಂದು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೆ ಈ ವರ್ಷ ತೆರಿಗೆ ಏರಿಕೆ ಬೇಡ ಎಂದರು. ನಿಮಗೆ ಬಹುಮತ ಇದೆ ಎಂದು ತೆರಿಗೆ ಏರಿಕೆ ಮಾಡಿದರೆ ನಾವು ಹೋರಾಟ ಮಾಡುವುದು ಖಂಡಿತ ಎಂದು ಪುರಂದರ ದೇವಾಡಿಗ ಎಚ್ಚರಿಸಿದರು.
ನೀವು ಹೇಳುವುದು ನನಗೆ ಅರ್ಥವಾಗುತ್ತಿದೆ. ಈಗಿನ ಸಂಕಷ್ಟದಲ್ಲಿ ದರ ಪರಿಷ್ಕರಣೆಗೆ ನನಗೂ ಮನಸ್ಸಿಲ್ಲ, ಆದರೆ ಸರಕಾರದ ಆದೇಶವನ್ನು ಪಾಲಿಸದಿದ್ದರೆ ಪುರಸಭೆಗೆ ಸಂಪನ್ಮೂಲದ ಕೊರತೆ ಆಗುತ್ತದೆ. ಜಿಲ್ಲೆಯ ಇತರ ಪುರಸಭೆಗಳಲ್ಲಿ ದರ ಪರಿಷ್ಕರಣೆ ಆಗಿದೆ ಎಂದು ಅಧ್ಯಕ್ಷ ಪ್ರಸಾದ್ ಕುಮಾರ್ ಉತ್ತರಿಸಿದರು. ಇದು ಜನರಿಗೆ ಹೊರೆಯಾಗುವ ವಿಷಯವಾಗಿರುವುದರಿಂದ ಎಲ್ಲಾ ಸದಸ್ಯರ ಅಭಿಪ್ರಾಯ ಒಂದೇ ರೀತಿ ಇರಲಿ. ಶಾಸಕ ಉಮಾನಾಥ್ ಕೋಟ್ಯಾನ್ ನೇತ್ರತ್ವದಲ್ಲಿ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುವ ಎಂದು ವಿರೋಧಪಕ್ಷದ ನಾಯಕ ಪಿ.ಕೆ ಥೋಮಸ್ ಹಾಗೂ ಸುರೇಶ್ ಕೋಟ್ಯಾನ್ ಸಲಹೆಗೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.
ಜ್ಯೋತಿನಗರದಲ್ಲಿರುವ ಸ್ಮಶಾನದ ಬಳಿ ವಾಹನ ನಿಲ್ಲಿಸಲೆಂದು ನಿರ್ಮಿಸಿರುವ ಶೆಡ್‌ನಲ್ಲಿ ಒಣ ಕಸ ಹಾಕುವುದೆಂದು ಪುರಸಭೆಯು ನಿರ್ಧರಿಸಿರುವುದಕ್ಕೆ ತನ್ನ ಆಕ್ಷೇಪವಿದೆ. ಅಲ್ಲಿ ಸುತ್ತಲೂ ಎಸ್‌ಸಿ ಎಸ್‌ಟಿ ಸಮುದಾಯದ ಮನೆಗಳಿವೆ. ಅಲ್ಲದೆ ಒಣಕಸ ಹಾಕುವುದೆಂದು ತಿರ್ಮಾನಿಸಿ ಮತ್ತೆ ಎಲ್ಲಾ ಹಸಿಕಸಗಳನ್ನೂ ತಂದು ಹಾಕಿ ಅಲ್ಲಿ ಗಲೀಜು ಮಾಡುವುದು ಬೇಡ ತಾನು ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಪುರಸಭಾ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ರೂಪಾ ಶೆಟ್ಟಿ ತಿಳಿಸಿದರು. ಇದರ ಬಗ್ಗೆ ಅಲ್ಲಿಯ ಜನರ ಬಳಿ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅಧ್ಯಕ್ಷರು ತಿಳಿಸಿದರು,.
ಹಳೆ ಪೊಲೀಸ್‌ಠಾಣೆ ಬಳಿಯಿದ್ದ ಅಂಬೇಡ್ಕರ್ ರಸ್ತೆ ನಾಮಫಲಕವನ್ನು ತೆಗೆದಿರುವುದಕ್ಕೆ ಕೊರಗಪ್ಪ ಆಕ್ಷೇಪ ವ್ಯಕ್ತಪಡಿಸಿದರು. ತೆಗೆದ ವಿಷಯ ಪುರಸಭೆಗೆ ಗೊತ್ತಿಲ್ಲ. ಅಂಬೇಡ್ಕರ್ ಜಯಂತಿ ಮುಂಚಿತವಾಗಿ ತಾತ್ಕಾಲಿಕ ನಾಮಫಲಕ ಅಳವಡಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಪೂಜಾರಿಯವರನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷೆ ಸುಜಾತ ಹಾಗೂ ಸದಸ್ಯರು, ಪರಿಸರ ಅಭಿಯಂತರೆ ಶಿಲ್ಪಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.