ತೆರಿಗೆ-ಜಿಡಿಪಿ ಅನುಪಾತ ಹೆಚ್ಚಿಸಲು ಪಾಕ್‌ಗೆ ಸಲಹೆ

ಕರಾಚಿ, ಮೇ ೮- ಮಿತಿಮೀರಿದ ಸಾಲದ ಹೊರೆ ಹಾಗೂ ಹಣಕಾಸಿನ ಸಂಕಷ್ಟದಿಂದ ನಲುಗಿ ನಜ್ಜುಗುಜ್ಜಾಗಿರುವ ಪಾಕಿಸ್ತಾನ ಈಗಾಗಲೇ ಆರ್ಥಿಕ ದುಸ್ಥಿತಿಯ ಪರಿಣಾಮ ದಿವಾಳಿಯತ್ತ ಸಾಗಿದೆ. ಈ ನಡುವೆ ಪಾಕ್‌ಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಸಲಹೆ ನೀಡಿದ್ದು, ಉದ್ದೇಶಿತ ಸಬ್ಸಿಡಿಗಳನ್ನು ನೀಡಲು ಮತ್ತು ಅನಿಶ್ಚಿತ ಆರ್ಥಿಕ ಪರಿಸ್ಥಿತಿಗಳನ್ನು ಪರಿಹರಿಸಲು ಮತ್ತು ಆರ್ಥಿಕತೆಯನ್ನು ಸುಸ್ಥಿರ ಬೆಳವಣಿಗೆಯ ಪಥದತ್ತ ಸಾಗಿಸಲು ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸುವಂತೆ ಸೂಚಿಸಿದೆ.
ಹಣದುಬ್ಬರದಿಂದ ನಾಗರಿಕರು ಹೈರಣಾಗಿದ್ದು, ಈ ಒತ್ತಡವನ್ನು ಕಡಿಮೆ ಮಾಡಲು ಉದ್ದೇಶಿತ ಸಬ್ಸಿಡಿಗಳ ಪ್ರಾಮುಖ್ಯತೆಗಳ ಬಗ್ಗೆ ಒತ್ತಿ ಹೇಳಿದೆ. ಅಲ್ಲದೆ ದೇಶದ ಆರ್ಥಿಕತೆಯನ್ನು ಸುಧಾರಿಸಲು ದೇಶೀಯ ಸಂಪನ್ಮೂಲಗಳ ಪರಿಣಾಮಕಾರಿ ಸಜ್ಜುಗೊಳಿಸಬೇಕೆಂದು ಎಡಿಬಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಡಿಬಿಯ ಪ್ರಧಾನ ನಿರ್ದೇಶಕ ಯೆವ್ಗೆನಿ ಝುಕೋವ್, ಪಾಕಿಸ್ತಾನದಲ್ಲಿ ಸಾರ್ವಜನಿಕ ವಲಯದ ಆಡಳಿತವನ್ನು ಸುಧಾರಿಸುವ ಮತ್ತು ಸುಧಾರಣಾ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಅದರಲ್ಲೂ ಪಾಕಿಸ್ತಾನವು ತನ್ನ ಆದಾಯ ಸಂಗ್ರಹದಲ್ಲಿ ಹೆಚ್ಚಿನ ಸುಧಾರಣೆ ಹೊಂದಬೇಕಿದೆ. ಬೆನ್‌ಝೀರ್ ಇನ್‌ಕಮ್ ಸಪೋರ್ಟ್ ಪ್ರೋಗ್ರಾಮ್ (ಬಿಐಎಸ್‌ಪಿ) ಜೊತೆ ಎಡಿಬಿಯು ೨೦೧೬ರಿಂದ ತೊಡಗಿಸಿಕೊಂಡಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ೨೦೨೧ರಿಂದ ಸುಮಾರು ೬೦೦ ಮಿಲಿಯನ್ ಡಾಲರ್ ನೆರವು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಮುಂಬರುವ ಹಣಕಾಸು ವರ್ಷಕ್ಕೆ ಪಾಕಿಸ್ತಾನದ ಬಜೆಟ್ ಯೋಜನೆಗಳನ್ನು ಚರ್ಚಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ. ಬ್ಯಾಲೆನ್ಸ್ ಆಫ್ ಪೇಮೆಂಟ್ ಬಿಕ್ಕಟ್ಟನ್ನು ನಿಭಾಯಿಸಲು ಹಾಗೂ ದೇಶವನ್ನು ದಿವಾಳಿಯಿಂದ ಪಾರು ಮಾಡಲು ಐಎಂಎಫ್ ಜೊತೆಗಿನ ಒಪ್ಪಂದವು ಪಾಕಿಸ್ತಾನಕ್ಕೆ ಮಹತ್ವಪೂರ್ಣವಾಗಿದೆ.