ತೆರಿಗೆ ಅಸ್ತ್ರದಿಂದ ಕೈ ದುರ್ಬಲಕ್ಕೆ ಬಿಜೆಪಿ ಯತ್ನ

ಸಿದ್ದು ಕಿಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೩೦:ತೆರಿಗೆ ಭಯೋತ್ಪಾದನೆ ಮೂಲಕ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು
ಸಾಧಿಸಬಹುದೆಂಬುದು ಬಿಜೆಪಿಯ ಭ್ರಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ,
ತೆರಿಗೆ ಪಾವತಿ ಮಾಡದಿರುವ ಕಾಂಗ್ರೆಸ್ ಪಕ್ಷದ ಮೇಲೆ ೧,೮೨೩ ಕೋಟಿ ರೂ. ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದಕ್ಕೆ ಕಿಡಿಕಾರಿರುವ ಅವರು, ೨೦೧೭-೧೮ರಲ್ಲೇ ಬಿಜೆಪಿ ಹೆಸರಿಲ್ಲದ ೯೨ ದಾನಿಗಳಿಂದ ಹಾಗೂ ೪.೫ ಲಕ್ಷ ಹೆಸರು, ವಿಳಾಸವಿಲ್ಲದ ೧,೨೯೭ ದಾನಿಗಳಿಂದ ೪೨ ಕೋಟಿ ರೂ. ದೇಣಿಗೆ ಪಡೆದಿರುವುದನ್ನು ಅವರು ಪ್ರಸ್ತಾಪಿಸಿ ಬಿಜೆಪಿಗೆ ಆಗ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸಿದ ಮಾನದಂಡವನ್ನೇ ಬಿಜೆಪಿಗೂ ಅನ್ವಯಿಸಿದರೆ ಕಳೆದ ೭ ವರ್ಷಗಳಲ್ಲಿ ನಡೆಸಿರುವ ತೆರಿಗೆ ಉಲ್ಲಂಘನೆಗಾಗಿ ಬಿಜೆಪಿ ೪,೨೬೩ ಕೋಟಿ ರೂ. ಪಾವತಿಸಬೇಕಾಗಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಇನ್ನಿತರ ಸಂಸ್ಥೆಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಹೊರಟಿದೆ. ಈ ಹುನ್ನಾರದ ಭಾಗವಾಗಿ ಕಾಂಗ್ರೆಸ್ ವಿರುದ್ಧ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಟಿಎಂಸಿ, ಸಿಪಿಐ ಸೇರಿದಂತೆ ವಿಪಕ್ಷಗಳ ಮೇಲೆ ತೆರಿಗೆ ಭಯೋತ್ಪಾದನಾ ಅಸ್ತ್ರ ಪ್ರಯೋಗಿಸುತ್ತಿದೆ. ಆದರೆ,ಬಿಜೆಪಿಯ ತೆರಿಗೆ ಉಲ್ಲಂಘನೆ ಬಗ್ಗೆ ಐಟಿ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು ಎಂಬುದನ್ನು ತಿಳಿಯದಿರುವಷ್ಟು ಜನ ದಡ್ಡರಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ರೂ. ಬಿಜೆಪಿ ಸುಲಿಗೆ ಮಾಡಿರುವುದು ಜಗಜ್ಜಾಹೀರಾಗಿದೆ. ಈ ಹಗರಣ ಮರೆ ಮಾಚಲು ಹಾಗೂ ಜನರ ಗಮನವನ್ನು ಬೇರೆಡೆ ಸೆಳೆಯಲು ವಿಪಕ್ಷಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದುರುದ್ದೇಶದಿಂದ ಕಾಂಗ್ರೆಸ್ ವಿರುದ್ಧ ತೆರಿಗೆ ವಂಚನೆಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯಲ್ಲಿ ಹಣಬಲ ಇದ್ದರೆ, ಕಾಂಗ್ರೆಸ್‌ನಲ್ಲಿ ಜನಬಲವಿದೆ. ತೆರಿಗೆ ವಂಚಕರು ಬ್ಯಾಂಕ್‌ಗಳನ್ನು ಮುಳುಗಿಸಿದವರು. ಗಣಿ ಲೂಟಿಕೋರರು, ಕಾಳಸಂತೆಕೋರರು, ಕಳ್ಳ-ಖದೀಮರೇ ಬಿಜೆಪಿಯ ಬಲವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿಯೆಂದರೆ ಭ್ರಷ್ಟರ ಹಣವನ್ನು ನುಂಗಿ ಅವರಿಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುವ ವಾಷಿಂಗ್‌ಮಿಷಿನ್ ಆಗಿದೆ.ಭ್ರಷ್ಟರು ತಾವು ಮಾಡಿದ ಪಾಪಗಳ ಮೇಲಿನ ತನಿಖೆಯಿಂದ ತಪ್ಪಿಸಿಕೊಳ್ಳಬೇಕಾದರೆ ಬಿಜೆಪಿ ಸೇರಿದರೆ ಸಾಕು. ಎಲ್ಲವೂ ಶುದ್ಧವಾಗಿಬಿಡುತ್ತದೆ ಎಂದು ವ್ಯಂಗ್ಯವಾಡಿದರು.
ಬಜೆಪಿ ಸೇರಿದ ಮೇಲೆ ಎಷ್ಟು ಬೇಕಾದರೂ ಭ್ರಷ್ಟಾಚಾರ, ಜನರ ಹಣ ಲೂಟಿ ಮಾಡಬಹುದು, ಅವರ ಮೇಲೆ ಯಾವ ಪ್ರಕರಣಗಳು ದಾಖಲಾಗುವುದಿಲ್ಲ. ಯಾವ ತನಿಖಾ ಸಂಸ್ಥೆಯು ಭ್ರಷ್ಟರನ್ನು ಹುಡುಕಿಕೊಂಡು ಹೋಗುವುದಿಲ್ಲ ಎಂದ ಅವರು, ಕಳ್ಳ-ಖದೀಮರ ಲೂಟಿ ಹಣದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಮತ್ತು ಅಧಿಕಾರವನ್ನು ಉಳಿಸಿಕೊಂಡಿದೆ. ಅದಕ್ಕೆ ಉತ್ತಮ ಉದಾಹರಣೆ ರಾಜ್ಯದಲ್ಲಿ ನಡೆದಿರುವ ಆಪರೇಷನ್ ಕಮಲ ಸಾಕ್ಷಿಯಾಗಿದೆ ಎಂದು ಟೀಕಿಸಿದರು.