ತೆರಿಗೆಯ ಮೇಲಿನ ಶೇ.5 ರ ರಿಯಾಯಿತಿ ಕಾಲವಧಿ ವಿಸ್ತರಣೆ; ಸಚಿವರಿಗೆ ಮೇಯರ್ ಮನವಿ

ದಾವಣಗೆರೆ. ಏ.೨೨; ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ-1976 ರ ಕಲಂ-108,109 ಮತ್ತು 109ಎ ಗಳಿಗೆ ತಿದ್ದುಪಡಿ ಮಾಡಿದ್ದು, ಸದರಿ ಕಾಯ್ದೆಗಳ ತಿದ್ದುಪಡಿ ಅನುಸಾರ ಹಾಗೂ ಸರ್ಕಾರದ ಸುತ್ತೋಲೆಯ ಪತ್ರದಂತೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಿರಾಸ್ಥಿಗಳ ಆಸ್ತಿ ತೆರಿಗೆ ಪದ್ದತಿಯನ್ನು ಜಾರಿಗೊಳಿಸಬೇಕಾಗಿರುತ್ತದೆ. ಆದ್ದರಿಂದ ತೆರಿಗೆಯ ಮೇಲಿನ ಶೇ.5 ರ ರಿಯಾಯಿತಿಯ ಸೌಲಭ್ಯದ ಕಾಲವಧಿಯನ್ನು ವಿಸ್ತರಿಸಲು ಮೇಯರ್ ಎಸ್.ಟಿ ವಿರೇಶ್ ಅವರು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದರಿ ಕಾಯಿದೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಪ್ರಸ್ತುತ ಈ ಕಾಯಿದೆಯಂತೆ ಆಸ್ತಿ ತೆರಿಗೆ ದರಗಳನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದ ಮೇಲೆ 2021-22 ನೇ ಸಾಲಿನಿಂದ ಅನ್ವಯವಾಗುವಂತೆ ನಿಗಧಿಪಡಿಸಿ ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಕಾಲೋಚಿತಗೊಳಿಸುವ ಪ್ರಕ್ರಿಯೆಯು ಅಂತಿಮ ಹಂತದಲ್ಲಿರುವುದರಿಂದ 2021-22 ನೇ ಸಾಲಿಗೆ ಸಾರ್ವಜನಿಕರಿಂದ ಆಸ್ತಿ ತೆರಿಗೆಯನ್ನು ಪಾವತಿಸಿಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ. ಹೀಗಾಗಿ 2021-22 ನೇ ಸಾಲಿಗೆ ಏಪ್ರಿಲ್ ತಿಂಗಳಲ್ಲಿ ಈಗಾಗಲೇ 20 ದಿನಗಳು ಕಳೆದಿರುವುದರಿಂದ ಸಾರ್ವಜನಿಕರು ರಿಯಾಯಿತಿ ಸೌಲಭ್ಯವನ್ನು ಪಡೆದಿರುವುದಿಲ್ಲ ಎಂಬ ಅಂಶವನ್ನು ಮಾನ್ಯ ನಗರಾಭಿವೃದ್ಧಿ ಸಚಿವರ ಗಮನಕ್ಕೆ ತಂದು ಏ. 2021 ರ ನಂತರ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಆಸ್ತಿ ತೆರಿಗೆಯ ಮೇಲಿನ ಶೇ.5 ರ ರಿಯಾಯಿತಿಯ ಸೌಲಭ್ಯದ ಕಾಲವಧಿಯನ್ನು ವಿಸ್ತರಿಸಲು ಹಾಗೂ 2021-22 ನೇ ಸಾಲಿನ ಜೂನ್ ನಂತರ ಪಾವತಿಸುವ ಆಸ್ತಿ ತೆರಿಗೆ ಮೇಲಿನ ದಂಡದ ಕಾಲವಧಿಯನ್ನು ಸಹ ವಿಸ್ತರಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮೇಯರ್ ಎಸ್.ಟಿ.ವೀರೇಶ್ ರವರು  ನಗರಾಭಿವೃದ್ಧಿ ಸಚಿವರನ್ನು ಕೋರಿದರು.