ತೆಗೆದುಕೊಂಡ ಸಾಲ ಮರುಪಾವತಿ ಮಾಡಿ ಯೋಜನೆಗಳ ಸದುಪಯೋಗ ತೆಗೆದುಕೊಳ್ಳಿ: ವಸಂತಮ್ಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.27: ಸರ್ಕಾರ ಬ್ಯಾಂಕ್ ಮೂಲಕ ನಿಮ್ಮ ಆರ್ಥಿಕ‌ಜೀವನ ಸುಧಾರಣೆಗೆಂದು ಜಾರಿಗೆ ತಂದಿರುವ ಯೋಜನೆಗಳಡಿ ಸಾಲ ಪಡೆದು, ನಿಗಧಿತ ಸಮಯದಲ್ಲಿ ಮರುಪಾವತಿಸಿ. ಬಡ್ಡಿ ಸಹಾಯಧನ ಪಡೆಯಬೇಕೆಂದು ಜಿಲ್ಲೆಯ ಕಂಪ್ಲಿ ಪುರಸಭೆಯಲ್ಲಿನ ಯೋಜನೆಗಳ  ಅನುಷ್ಟಾನಾಧಿಕಾರಿ ವಸಂತಮ್ಮ ಹೇಳಿದರು.
ಅವರು ಇಂದು ಕಂಪ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸರ್ಕಾರ ಈ ಮೊದಲು ಸಾಲದಲ್ಲಿ ಸಬ್ಸಿಡಿ ನೀಡುತ್ತಿತ್ತು. ಆದರೆ ಜನತೆ ಸಾಲ ಪಡೆದು, ರಿಯಾಯಾತಿ ಪಡೆದು ನಂತರ ಸಾಲ ಕಟ್ಟದೇ ಇರುವ ಕಾರಣ, ಈಗ ಸಾಲದ ರಿಯಾಯ್ತಿ ತೆಗೆದು. ಸಾಲವನ್ನು ಸರಿಯಾಗಿ ಕಟ್ಟಿದರೆ ಬಡ್ಡಿ ರಿಯಾಯ್ತಿ ಕೊಡುತ್ತಿದ್ದಾರೆ.
ಆಂಧ್ರಪ್ರದೇಶದ ಮಹಿಳೆಯರಂತೆ ಸರ್ಕಾರಿ ಯೋಜನೆಗಳಡಿ ಸಾಲ ಪಡೆದು ಮರುಪಾವತಿ ಮಾಡಿ ಸದುಪಯೋಗಪಡಿಸಿಕೊಳ್ಳಿ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಅವರು ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಬಡ್ಡಿ ರಹಿತ ಸಾಲ ಪಡೆದು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಉಜ್ವಲ ಯೋಜನೆಯಡಿ ಸಂಪರ್ಕ ಪಡೆದವರು ಈ ಕೆವೈಸಿ ಮಾಡಿದರೆ ಮಾತ್ರ ಸಬ್ಸಿಡಿ ಬರುತ್ತೆ ಎಂದು ಸ್ಥಳೀಯ ಗ್ಯಾಸ್ ವಿತರಕರ ಪರವಾಗಿ ವೀರೇಶ್ ತಿಳಿಸಿದರು.
ಅಡುಗೆ ಅನಿಲ ವಿತರಕ ಶ್ರೀನಿವಾಸ್ ಅವರು ಕಂಪ್ಲಿ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ 6 ಸಾವಿರಕ್ಕೂ ಹೆಚ್ಚು   ಬಡ ಜನರಿಗೆ ಉಜ್ವಲ ಯೋಜನೆಯ ಸಂಪರ್ಕ ನೀಡಿದೆಂದು ತಿಳಿಸಿದರು.
ಪ್ರಧಾನ ಮಂತ್ರಿ ಮೋದಿ ಅವರು ಯಾತ್ರೆಯ ಕುರಿತು ಮಾತನಾಡಿದ್ದನ್ನು ಡಿಜಿಟಲ್ ಪರದೆ ಮೂಲಕ ವೀಕ್ಷಣೆ ಮಾಡಿದರು.
ಈ ವೇಳೆ ವಿವಿಧ ಯೋಜನೆಗಳಡಿ ಪಡೆದ ಸಾಲದ  ಮಂಜೂರಾತಿ, ಅಡುಗೆ ಅನಿಲ ಸಂಪರ್ಕವನ್ನು ವಿತರಣೆ ಮಾಡಲಾಯ್ತು‌. ಪಾಲ್ಗೊಂಡ ಜನತೆಗೆ ಸಂಕಲ್ಪ ಯಾತ್ರೆಯ ಪ್ರತಿಜ್ಞಾವಿಧಿ ಭೋದನೆ ಮಾಡಲಾಯ್ತು. 
ಸಾಮಾರಂಭದಲ್ಲಿ ಆರೋಗ್ಯ ಇಲಾಖೆಯ ಡಾ.ಉಷಾ, ಅಂಚೆ ಇಲಾಖೆಯ ಪುರುಷೋತ್ತಮ,  ಕೆನರಾ ಬ್ಯಾಂಕಿನ ವಿಕ್ರಂ ಮೊದಲಾದವರು ಇದ್ದರು.
ಜನರಿಗೆ ಆರೋಗ್ಯ ತಪಾಸಣೆ, ಉಜ್ವಲ ಯೋಜನೆಯ ನೋಂದಣಿ, ಆಧಾರ ತಿದ್ದುಪಡಿ ಕಾರ್ಯ ನಡೆಯಿತು.