ತೆಕ್ಕಲಕೋಟೆ ಪೊಲೀಸರಿಂದ ಅಂತಾರಾಜ್ಯ ದರೋಡೆಕೋರರ ಬಂಧನ

ಬಳ್ಳಾರಿ, ನ.3- ಜಿಲ್ಲೆಯ ತೆಕ್ಕಲಕೋಟೆ ಪೊಲೀಸರು ಹೆದ್ದಾರಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಮೂವರನ್ನು ಬಂಧಿಸಿ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಕಳಂಬ ತಾಲೂಕಿನ ಅಂದೇರಾ ಗ್ರಾಮಕ್ಕೆ ಸೇರಿದ ಸುಭಾಷ್ ಕಾಳೆ (25), ನಾನಾ ಕಾಳೆ(40), ಮತ್ತು ಸುಭಾಷ್ ಕಾಳೆ (29) ಮತ್ತಿತರ ಮೂವರು ಹೆದ್ದಾರಿಗಳಲ್ಲಿ ಮಾರಕಾಸ್ತ್ರಗಳನ್ನು ಬಳಸಿ ಲಾರಿ ಚಾಲಕರು ಕ್ಲೀನರ್ ಗಳನ್ನು ಬೆದರಿಸಿ ಸುಲಿಗೆ, ದರೋಡೆ, ಟೈಯರ್ ಡೀಸೆಲ್ ಕಳ್ಳತನ ಜೊತೆಗೆ ರಸ್ತೆಯ ಪಕ್ಕದ ಮನೆಗಳ ಕಳ್ಳತನ ನಡೆಸುತ್ತಿದ್ದರು.
ಇವರು ಕಳೆದ ಅಕ್ಟೋಬರ್ 10 ರಂದು ಬೆಳಗಿನ ಜಾವ ಜಿಲ್ಲೆಯ ತೆಕ್ಕಲಕೋಟೆ ಬಳಿ ಲಾರಿಯೊಂದನ್ನು ತಡೆದು ಲಾರಿ ಚಾಲಕ ಮತ್ತು ಕ್ಲೀನರ್ ಅವರ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ ಹಣ ಮತ್ತು ಲಾರಿ ತೆಗೆದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತೆಕ್ಕಲಕೋಟೆ ಠಾಣೆಯ ಸಿಪಿಐ ಕಾಳಿ ಕೃಷ್ಣ ಮತ್ತು ಸಿರಿಗೇರಿ ಠಾಣೆಯ ಪಿಎಸ್ಐ ಅಮರೇಗೌಡ ಮತ್ತವರ ಸಿಬ್ಬಂದಿ ತನಿಖೆ ಮಾಡಿ ಈ ಅಂತರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಇನ್ನು 3 ಜನರು ಪರಾರಿಯಲ್ಲಿದ್ದಾರೆ ಎಂದು ಎಸ್ಪಿ ಅಡಾವತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ