ತೆಕ್ಕಲಕೋಟೆ ಪಟ್ಟಣದಲ್ಲಿ 10ದಿನಕ್ಕೊಮ್ಮೆ ನೀರು ಪೂರೈಕೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.08: ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಜನರಿಗೆ ನೀರು ಪೂರೈಕೆ ಮಾಡುವ ಕೆರೆಯಲ್ಲಿ ನೀರು ಕಡಿಮೆಯಾಗಿರುವುದರಿಂದ 10ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂದು ಪಟ್ಟಣಪಂಚಾಯಿತಿ ಅಧಿಕಾರಿಗಳು ಕಸ ವಿಲೇವಾರಿ ವಾಹನ ಮೂಲಕ ಪಟ್ಟಣದ ತುಂಬೆಲ್ಲ ಪ್ರತಿನಿತ್ಯವೂ ಪ್ರಚಾರ ಮಾಡಿಸುತ್ತಿದ್ದಾರೆ.
ಸುಮಾರು 30ಸಾವಿರ ಜನಸಂಖ್ಯೆಯನ್ನು ಹೊಂದಿರುವ ತೆಕ್ಕಲಕೋಟೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 1984ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡುರಾವ್ ಕೆರೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದ 10ವರ್ಷಗಳ ನಂತರ ಕೆರೆ ನಿರ್ಮಾಣ ಕಾರ್ಯ ಮುಗಿದಿದ್ದು, ಭವಿಷ್ಯದ 20ವರ್ಷಗಳ ಜನಸಂಖ್ಯೆಗನುಗುಣವಾಗಿ ಕೆರೆ ನಿರ್ಮಾಣವನ್ನು ಮಾಡಲಾಗಿತ್ತು. ಆದರೆ ಜನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಹೋಗಿದ್ದು, ಹಳೆಯ ಕೆರೆಯಿಂದ ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವ ಉದ್ದೇಶದಿಂದ ಈ ಹಿಂದೆ ಶಾಸಕರಾಗಿದ್ದ ಎಂ.ಎಸ್.ಸೋಮಲಿಂಗಪ್ಪ ರವರು 2ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದರು.
“ಕೆರೆಗಿಳಿಯುವ ಕುರಿ, ಮೇಕೆ, ದನಕರುಗಳು”
ಕೆರೆಗೆ ಕಾವಲುಗಾರರನ್ನು ನೇಮಕ ಮಾಡಲಾಗಿದೆ, ಆದರೆ ಕಾವಲುಗಾರರು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಕುರಿ, ಮೇಕೆ, ದನಕರುಗಳು ನೇರವಾಗಿ ಕೆರೆಗಿಳಿದು ನೀರು ಕುಡಿದು ಹೋಗುವುದು ಸಾಮಾನ್ಯವಾಗಿದೆ. ಕೆರೆಯ ರಕ್ಷಣೆಗಾಗಿ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಪಶ್ಚಿಮ ದಿಕ್ಕಿಗಿರುವ ಗೇಟ್ ಸದಾ ಕಾಲ ತೆರೆದುಕೊಂಡು ಇರುತ್ತದೆ. ಕೆರೆ ಪ್ರವೇಶ ದ್ವಾರದಲ್ಲಿರುವ ಗೇಟನ್ನು ಕಿತ್ತಿ ಹಾಕಿರುವುದರಿಂದ ಪಶ್ಚಿಮ ಮತ್ತು ಪ್ರವೇಶ ದ್ವಾರದ ಗೇಟ್‌ನಿಂದ ದನಕರುಗಳು, ಕುರಿ, ಮೇಕೆಗಳು ಕೆರೆಗೆ ತೆರಳಿ ನೀರು ಕುಡಿದು ಬರಲು ಅನುಕೂಲವಾಗಿದೆ. 

ಹೇಳಿಕೆ:-     ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ತೆಕ್ಕಲಕೋಟೆ ಪಟ್ಟಣದಲ್ಲಿ ಸಾಮಾನ್ಯ ದಿನಗಳಲ್ಲಿ 8 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು ಈಗ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ ಇದರಿಂದಾಗಿ ಸಾಮಾನ್ಯ ದಿನಗಳಲ್ಲಿಯೂ 8 ದಿನಕ್ಕೊಮ್ಮೆ ನೀರನ್ನು ಬಿಡುತ್ತಿದ್ದರೆ, ಬೇಸಿಗೆ ಎನ್ನುವ ನೆಪ ಹೇಳಿ 10ದಿನಕ್ಕೊಮ್ಮೆ ಅಧಿಕಾರಿಗಳು ನೀರು ಬಿಡುವ ಬಗ್ಗೆ ಪಟ್ಟಣದಲ್ಲಿ ಪ್ರಚಾರ ಮಾಡುತ್ತಿದ್ದಾರೆಂದು ಗ್ರಾಮಸ್ಥರಾದ ಮಾರೆಪ್ಪ, ಎಚ್. ಕಾಡಸಿದ್ದ, ಸಣ್ಣ ಕಾಡಸಿದ್ದ, ಮಲ್ಲಮ್ಮ, ಯಂಕಮ್ಮ ಆರೋಪಿಸಿದ್ದಾರೆ.

 ತೆಕ್ಕಲಕೋಟೆ ಪಟ್ಟಣದಲ್ಲಿ ಪ್ರತಿ ವರ್ಷ ಫೆಬ್ರವರಿ- ಮಾರ್ಚ್ ಯಿಂದ ಮಳೆಗಾಲದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಪಟ್ಟಣದ ಎಲ್ಲಾ ವಾರ್ಡ್‌ ಗಳಿಗೆ ಹತ್ತು  ದಿನಗಳಿಗೆ ಒಮ್ಮೆ ನೀರು ಬಿಡಲಾಗುತ್ತದೆ ಹಾಗೂ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ ಮತ್ತು ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತಿದ್ದು ಈಗ ಇರುವ ಕೆರೆಯ ನೀರು ಸಾಲದು ಅದ್ದರಿಂದ ಕೆರೆಯ ವಿಸ್ತೀರ್ಣವನ್ನು ಇನ್ನು ಹೆಚ್ಚಾಗಿ ನಿರ್ಮಿಸಿ ಕೊಟ್ಟರೆ ಪಟ್ಟಣದಲ್ಲಿ ಈ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿದಂತಗುತ್ತದೆ ಎಂದು ಗ್ರಾಮಸ್ಥರಾದ ಕೆ.ಬಡೇಸಾಬ್, ಚಂದಿ ಹೊನ್ನುರುಸಾಬ್, ಎಸ್.ಖಾಸಿಂ, ಜೆ.ಇಸ್ಮಾಯಿಲ್‌, ಓಬಳಮ್ಮ ತಿಳಿಸಿದರು.

  ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವರ್ಷದ ನಾಲ್ಕು ತಿಂಗಳು ಬೇಸಿಗೆಯಲ್ಲಿ ಜನರಿಗೆ ಶುದ್ಧ ನೀರೊದಗಿಸುವ ಉದ್ದೇಶದಿಂದ ಕೆರೆಯಲ್ಲಿ ಬಾಗೇವಾಡಿ ಕಾಲುವೆಯಿಂದ ನೀರನ್ನು ಸಂಗ್ರಹಿಸಲಾಗಿತ್ತು. ಆದರೆ ಈ ಬಾರಿ ಎಲ್.ಎಲ್.ಸಿ.ಕಾಲುವೆಯಲ್ಲಿ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ ಸಮರ್ಪಕವಾಗಿ ನೀರು ತುಂಬಿಸುವ ಕಾರ್ಯವನ್ನು ನಮ್ಮ‌ ಪ.ಪಂ ಸಿಬ್ಬಂದಿಯವರು ಮಾಡಿಲ್ಲ. ಈಗ ಕೆರೆಯಲ್ಲಿ ಶೇ.30ರಷ್ಟು ಮಾತ್ರ ನೀರು ಸಂಗ್ರಹವಿದ್ದು, ಅದನ್ನು ಕಾಲುವೆಗೆ ನೀರು ಬರುವ ತನಕ ಸಾರ್ವಜನಿಕರಿಗೆ ನೀರೊದಗಿಸುವ ಉದ್ದೇಶದಿಂದ 10ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತಿದೆ
 ಎಂದು ಪ.ಪಂ. ಮುಖ್ಯಾಧಿಕಾರಿ ಈರಣ್ಣ ತಿಳಿಸಿದ್ದಾರೆ.