ತುಳು ಭಾಷೆಯ ಸ್ಥಾನಮಾನಕ್ಕಾಗಿ ಒಗ್ಗಟ್ಟಿನ ಕೆಲಸ ಆಗಬೇಕಿದೆ: ಗುರುದೇವಾನಂದ ಸ್ವಾಮೀಜಿ

ಸುಳ್ಯ ತಾಲೂಕು ೨ನೇ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಮೇಳ ಸಮಾಪನ

ಸುಳ್ಯ , ಎ.೨೧- ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು. ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು. ತುಳು ಭಾಷೆಯ ಸ್ಥಾನಮಾನ ದಕ್ಕಬೇಕಾದರೆ ಜನರ ಮತ್ತು ಜನಪ್ರತಿನಿಧಿಗಳ ಮೂಲಕ ಒಗ್ಗಟ್ಟಿನ ಕೆಲಸ ಆಗಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ಕೋಟೆಮುಂಡುಗಾರಿನ ಬಜನಿ ದಿ.ರಾಮಯ್ಯ ರೈ ಸಭಾಂಗಣದಲ್ಲಿ ದಿ.ಕೋಟೆ ವಸಂತಕುಮಾರ್ ವೇದಿಕೆಯಲ್ಲಿ ನಡೆದ ಸುಳ್ಯ ತಾಲೂಕು ೨ನೇ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಆಶೀವರ್ಚನ ನೀಡಿದರು. ತುಳು ನಾಡಿನ ಸಂಸ್ಕೃತಿ, ಆಚಾರ ವಿಚಾರಗಳು ಮುಂದಿನ ಜನಾಂಗಕ್ಕೆ ಮುಂದುವರಿಯಬೇಕು. ತುಳು ಕೇವಲ ಒಬ್ಬರ ಭಾಷೆ ಅಲ್ಲ. ಅದು ಎಲ್ಲಾ ಸಮುದಾಯಗಳ ಭಾಷೆಯಾಗಿ ಬೆಳವಣಿಗೆ ಆಗಿದೆ ಎಂದು ಹೇಳದರು.

ಸರ್ವಾಧ್ಯಕ್ಷತೆಯನ್ನು ನಿಂತಿಕಲ್ಲು ಕೆ.ಎಸ್.ಜಿ. ಪಿ.ಯು.ಕಾಲೇಜಿನ ಪ್ರಾಂಶುಪಾಲ ಸದಾನಂದ ರೈ ಕೂವೆಂಜ ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಮತಿಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತುಳು ಸಮ್ಮೇಳನ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ರೈ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ, ಜೈ ಗುರುದೇವ ಸೇವಾ ಬಳಗ ಸುಳ್ಯ ಇದರ ಅಧ್ಯಕ್ಷ ರಾಧಾಕೃಷ್ಣ ಪಕಳ, ಪತಂಜಲಿ ಯೋಗ ಸಮಿತಿ ಮಂಗಳೂರು ಇದರ ಯೋಗ ಶಿಕ್ಷಕಿ ಸರಸ್ವತಿ, ಸಮಿತಿಯ ಖಜಾಂಜಿ ಕರುಣಾಕರ ರೈ, ಪುಷ್ಪರಾಜ್ ಗಾಂಭೀರ್ ಉಪಸ್ಥಿತರಿದ್ದರು. ಗೀತಾ ಮತ್ತು ಪ್ರೇಮಾವತಿ ಪ್ರಾರ್ಥಿಸಿದರು. ಕೂಸಪ್ಪ ಗೌಡ ಸ್ವಾಗತಿಸಿದರು. ಭಾಸ್ಕರ ಶೇಣಿ ವಂದಿಸಿದರು. ಪ್ರದೀಪ್ ಕುಮಾರ್ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದಲ್ಲಿ ೧೬ ಮಂದಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ವೆಂಕಟ್ರಮಣ ಭಟ್ ಪವನ ಮುಂಡುಗಾರು, ಯಕ್ಷಗಾನದಲ್ಲಿ ಕೋಡ್ಲ ಗಣಪತಿ ಭಟ್, ಹೈನುಗಾರಿಕೆಯಲ್ಲಿ ಕೆದ್ಲ ನಾರಾಯಣ ಭಟ್, ಶಿಕ್ಷಣ ಕ್ಷೇತ್ರದಲ್ಲಿ ಎಂ.ಪಿ.ಶಿವಮ್ಮ ಪುರುಷೋತ್ತಮ ಗೌಡ ಮಡ್ತಿಲ, ಸ್ಕೌಟ್ ಗೈಡ್ ನಲ್ಲಿ ಬಾಪೂ ಸಾಹೇಬ್ ಸುಳ್ಯ, ಭೂತಾರಾಧನೆಯಲ್ಲಿ ಜಯರಾಮ ಅಜಿಲ, ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಪಾಲ ಶೇಣಿ, ತುಳು ಲಿಪಿ ಪ್ರಚಾರ ಜಗದೀಶ್ ಗೌಡ ಕಲ್ಕಳ, ಸಹಕಾರ ಕ್ಷೇತ್ರದಲ್ಲಿ ಗುರುಪ್ರಸಾದ್ ರೈ ಮೊರಂಗಲ್ಲು, ವೈದ್ಯಕೀಯ ಕ್ಷೇತ್ರ ಡಾ.ರಘುರಾಮ ಮಾಣಿಬೆಟ್ಟು, ದೇಶಸೇವೆಗಾಗಿ ಸುರೇಶ್ ಬಿ. ಅಗಲ್ಪಾಡಿ, ಲಲಿತ ಕಲೆಯಲ್ಲಿ ವಾಸುದೇವ ರೈ ಬೆಳ್ಳಾರೆ, ಸಮಾಜ ಸೇವೆಗಾಗಿ ಕೇಶವ ದೀಕ್ಷಿತ್ ಕೋಟೆಮುಂಡುಗಾರು, ನಾಟಿವೈದ್ಯರಾಗಿ ಗಂಗಾಧರ ಆರ್ಚಾಯ ಮುಂಡುಗಾರು ಹಾಗೂ ಸಂಘಟನೆಯಲ್ಲಿ ಸುಳ್ಯದ ಶಾರದಾಂಬಾ ಸೇವಾ ಸಮಿತಿಗೆ ಗೌರವಿಸಲಾಯಿತು.