ತುಳು ಪತ್ರಿಕೆಗಳಿಂದ ‘ತುಳು ಸಂಸ್ಕೃತಿ’ಉಳಿಸುವ ಕಾಯಕ

ಪುತ್ತೂರು,ಎ.೩- ಪತ್ರಿಕೆಗಳು ಸಮಾಜದ ಕೈಕನ್ನಡಿ, ಜ್ಞಾನಪ್ರಸಾರ ಮಾಡುವ ಮಾಧ್ಯಮ. ಈ ಮಾಧ್ಯಮಗಳು ಜಗತ್ತಿನ ವಿಚಾರಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತಿವೆ. ಇವುಗಳ ನಡುವೆ ಪ್ರಾದೇಶಿಕ ಮಟ್ಟದಲ್ಲಿ ತುಳು ಪತ್ರಿಕೆಗಳು ತುಳು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿವೆ. ಇಂತಹ ತುಳು ಪತ್ರಿಕೆಗಳು ಉಳಿಯಬೇಕು. ಪತ್ರಿಕೆಯ ಹಿಂದಿರುವ ಭಾಷೆ ಅದರ ಹಿಂದಿರುವ ಸಾಂಸ್ಕೃತಿಕತನ ಉಳಿಯಬೇಕು. ತಾಯಿ ಭಾಷೆಯಾದ ತುಳು ಭಾಷೆ ನಿರ್ಲಕ್ಷ್ಯಕ್ಕೀಡಾಗಬಾರದು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನ ಸಾಧ್ವಿ ಮಾತಾನಂದಮಯಿ ಹೇಳಿದರು.
ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಒಡಿಯೂರು ಗುರುದೇವ ಸ್ವಾಮಿಜಿಯವರ ಷಷ್ಠ್ಯಬ್ಧಿ ಸಂಭ್ರಮದ ತಾಲೂಕು ಸಮಿತಿಯ ಸಹಕಾರದಲ್ಲಿ ಶುಕ್ರವಾರ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ತುಳುನಾಡಿನ ಪುರಾತನ ತುಳು ಸಂಸ್ಕೃತಿ ಮನಸ್ಸಿಗೆ ಬಹಳ ಖುಷಿಕೊಡುವ ಸಂಸ್ಕೃತಿ. ತುಳು ಪತ್ರಿಕೆಗಳ ಮೂಲಕ ತುಳು ಭಾಷೆಯು ರಾಷ್ಟ್ರೀಯವಾಗಿ ಬೆಳೆದಿದೆ. ನಮ್ಮದೇ ಆದ ತುಳು ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ತುಳುನಾಡಿ ಪ್ರತಿಯೊಬ್ಬರು ಆಸಕ್ತಿ ವಹಿಸಬೇಕು. ಸಾಹಿತ್ಯಗಳು ಪಡೆದುಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕು. ತುಳುವಿನಲ್ಲಿ ಸುಮಾರು ೭೩ ಪತ್ರಿಕೆಗಳು ಪ್ರಾರಂಭಗೊಂಡಿದ್ದವು. ಪತ್ರಿಕೆಗಳು ಉಳಿಯಬೇಕಾದರೆ ಜನರ ಆಸಕ್ತಿ ಅಗತ್ಯ ಎಂದು ಅವರು ಹೇಳಿದರು.
ಪೂವರಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ ಮಾತನಾಡಿ, ೧-೧೦ತರಗತಿ ತನಕ ತುಳು ಪಠ್ಯ ರಚನೆಯಾದ ಸಂದರ್ಭದಲ್ಲಿ ಉಡುಪಿ ಹಾಗೂ ದ.ಕ ಜಿಲ್ಲೆಯ ಸುಮಾರು ೬೦ ಶಿಕ್ಷಕರು ಸಹಕರಿಸಿದ್ದರೂ ಆ ಶಿಕ್ಷಕರ ಶಾಲೆಗಳಲ್ಲಿಯೇ ಅನುಷ್ಟಾನ ಆಗಿಲ್ಲ. ಪುತ್ತೂರು ತಾಲೂಕಿನ ಸುಮಾರು ೬೦ಶಾಲೆಗಳಲ್ಲಿ ತುಳು ಕಲಿಸುವ ಕಾರ್ಯ ನಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳಷ್ಟು ಜವಾಬ್ದಾರಿಯುತ ಸ್ಥಾನದಲ್ಲಿದೆ. ದೇಶದ ಅಭಿವೃದ್ಧಿ, ಆರ್ಥಿಕ ಬೆಳವಣಿಗೆಗೆ ಅವುಗಳ ಕಾರ್ಯ ಪ್ರಮುಖವಾಗಿದೆ. ಕಳೆದ ಹಲವು ವರ್ಷಗಳಿಂದ ಪೂವರಿ ಪತ್ರಿಕೆ ಮೂಲಕ ವಿಜಯಕುಮಾರ್ ಅವರು ತುಳುವಿನ ಮಹತ್ವವನ್ನು ತಿಳಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಡಿಯೂರು ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡಾ, ಪೂವರಿ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಭಂಡಾರಿ, ಗಾಯತ್ರಿ ವಿಜಯ ಕುಮಾರ್ ಭಂಡಾರಿ, ಪುರಂದರ ಶೆಟ್ಟಿ, ವಿದ್ಯಾಶ್ರೀ ಉಳ್ಳಾಲ್, ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ, ಕಲಾವಿದ ಕೃಷ್ಣಪ್ಪ, ಜಯಪ್ರಕಾಶ್ ರೈ ನೂಜಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಜ್ರಮಾತಾ ತಂಡದಿಂದ ತುಳು ಭಜನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ವಕೀಲ ಮಹೇಶ್ ಕಜೆ ಉದ್ಘಾಟಿಸಿದರು. ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ತುಳು ಭಾಷೆಯಲ್ಲಿ ಪ್ರಕಟಗೊಂಡಿದ್ದ ಹಲವು ಪತ್ರಿಕೆಗಳ ಪ್ರದರ್ಶನವು ಸಮ್ಮೇಳನದಲ್ಲಿ ಆಯೋಜಿಸಲಾಗಿತ್ತು.
ಮಲ್ಲಿಕಾ ಜೆ. ರೈ ಪ್ರಾರ್ಥಿಸಿದರು. ಶಿಕ್ಷಕಿ ದೇವಕಿ ಸ್ವಾಗತಿಸಿದರು. ಮಾಜಿ ಪುರ
ಸಭಾಪತಿ ರಾಜೇಶ್ ಬನ್ನೂರು ವಂದಿಸಿದರು.