ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸಕ್ಕೆ ವೇಗ

ಸುಳ್ಯ, ಎ.೨೦- ತುಳುನಾಡಿನ ಜನರು ತುಳು ಭಾಷೆಯ ಲಿಪಿಯಲ್ಲಿ ಬರೆಯಲು ಹಾಗೂ ಓದುವ ಬಳಕೆ ಹೆಚ್ಚಾದರೆ ತುಳು ಭಾಷೆಗೆ ಹೆಚ್ಚಿನ ಮಹತ್ವ ಬಂದೊದಗಿ, ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ಸುಗಮವಾಗುತ್ತದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಒಡಿಯೂರು ಶ್ರೀಗಳವರ ಷಷ್ಠಬ್ಧ ಸಂಭ್ರಮ ಸುಳ್ಯ ತಾಲೂಕು ಸಮಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ತುಳು ಕೂಟ ಸುಳ್ಯ, ಕಳಂಜ ಬಾಳಿಲ ಪ್ರಾ.ಕೃ.ಪ.ಸಹಕಾರಿ ಸಂಘ ಹಾಗೂ ಜ್ಞಾನವಾಹಿನಿ ಪ್ರಾದೇಶಿಕ ಸಮಿತಿ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಕಳಂಜದಲ್ಲಿ ನಡೆದ ಸುಳ್ಯ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಹಾಗೂ ಕೃಷಿ ಮೇಳ-೨೦೨೧ ನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಕೆಲವು ಭಾಷೆಗಳಿಗೆ ಲಿಪಿಯೇ ಇಲ್ಲ. ಆದರೆ, ತುಳು ಭಾಷೆಗೆ ಲಿಪಿ ಇದೆ. ಹಾಗಿದ್ದರೂ, ತುಳು ಲಿಪಿಯನ್ನು ಅಭ್ಯಸಿಸಿದವರ ಸಂಖ್ಯೆ ತೀರಾ ಕಡಿಮೆ ಇದೆ. ಆ ಮೂಲಕ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸಕ್ಕೆ ವೇಗ ಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ ಸ್ವಾತಂತ್ರಕ್ರಾಂತಿಗೆ ಮುನ್ನುಡಿ ಬರೆದ ಸುಳ್ಯದ ನೆಲದಿಂದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಮಹಾತ್ಕಾರ್ಯ ಹಾಗೂ ತುಳು ಭಾಷೆಯನ್ನು ರಾಜ್ಯದ ಭಾಷೆಯಾಗಿ ಮಾರ್ಪಡಿಸುವ ಕ್ರಾಂತಿಕಾರಿ ಕೆಲಸವೂ ಸುಳ್ಯದಿಂದಲೇ ಆಗಲಿ. ಜಿಲ್ಲೆಯ ೯೦೦ ಶಾಲೆಗಳಲ್ಲಿ ಕೇವಲ ೫೪ ಶಾಲೆಗಳಲ್ಲಿ ಮಾತ್ರ ತುಳು ಭಾಷೆಯನ್ನು ಕಲಿಸಲಾಗುತ್ತದೆ. ಎಲ್ಲಾ ಶಾಲೆಗಳಲ್ಲೂ ತುಳು ಭಾಷೆಯನ್ನು ಕಲಿಸುವ ಕಾರ್ಯ ನಡೆದರೆ, ತುಳು ಭಾಷೆಗೆ ಸಿಗಬೇಕಾದ ಸ್ಥಾನಮಾನ ಖಂಡಿತವಾಗಿಯೂ ಸಿಗಲಿದೆ ಎಂದರು. ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ನಿಂತಿಕಲ್ಲಿನ ಕೆ.ಎಸ್.ಜಿ.ಪಿ.ಯು ಕಾಲೇಜ್‌ನ ಪ್ರಿನ್ಸಿಪಾಲ್ ಸದಾನಂದ ರೈ ಕೂವಂಜೆ ವಹಿಸಿದ್ದರು. ಬೆಳ್ಳಾರೆ ಜಿ.ಪಂ. ಕ್ಷೇತ್ರದ ಸದಸ್ಯ ಎಸ್.ಎನ್. ಮನ್ಮಥ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಸಮಿತಿಯ ಕೂಸಪ್ಪ ಗೌಡ ಮುಗುಪ್ಪು, ಜೆ.ಕೆ. ರೈ, ತುಳು ಅಕಾಡೆಮಿ ಸದಸ್ಯ ಶಿಶಿಧರ ಶೆಟ್ಟಿ, ಕಡಬ ದಿನೇಶ್ ರೈ, ತೋಟಗಾರಿಕಾ ಅಧಿಕಾರಿ ಸುಹಾನ, ಕೃಷಿ ಅಧಿಕಾರಿ ಮೋಹನ ನಂಗಾರ್, ಕುಸುಮಾ ಆರ್ ರೈ ಭಜನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.