ತುಳುನಾಡ ತುಳು ಸಂಸ್ಕೃತಿ ಮನಸ್ಸಿಗೆ ಖುಷಿಕೊಡುವ ಸಂಸ್ಕೃತಿ

ಮುಂಬಯಿ , ಎ.೫- ತುಳುನಾಡಿನ ಪುರಾತನ ತುಳು ಸಂಸ್ಕೃತಿ ಮನಸ್ಸಿಗೆ ಬಹಳ ಖುಷಿಕೊಡುವ ಸಂಸ್ಕೃತಿ. ತುಳು ಪತ್ರಿಕೆಗಳ ಮೂಲಕ ತುಳು ಭಾಷೆಯು ರಾಷ್ಟ್ರೀಯವಾಗಿ ಬೆಳೆದು, ಅದರ ಮುಖಾಂತರ ತುಳು ಭಾಷೆಯು ಹೆಸರುಗಳಿಸಬೇಕು. ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಳನದ ಮುಖಾಂತರ ತುಳು ಭಾಷೆ ೮ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗುವ ದೊಡ್ಡ ಕನಸು ನನಸಾಗಲು ಸಹಕಾರಿಯಾಗಲಿ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಒಡಿಯೂರು ಗುರುದೇವ ಸ್ವಾಮಿಜಿಯವರ ಷಷ್ಠ್ಯಬ್ಧಿ ಸಂಭ್ರಮ ತಾಲೂಕ ಸಮಿತಿಯ ಸಹಯೋದೊಂದಿಗೆ ಕಳೆದ ಶುಕ್ರವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಸಿದ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತಾನಂದಮಯಿ ಮಾತನಾಡಿ ತುಳು ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ತುಳುನಾಡಿ ಪ್ರತಿಯೊಬ್ಬರು ಆಸಕ್ತಿ ವಹಿಸಬೇಕು. ಸಾಹಿತ್ಯಗಳು ಪಡೆದುಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ ಪೂವರಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಪ್ರತಿಯೊಬ್ಬರ ತುಳು ಕಲಿತಾಗ ಮಾತ್ರ ತುಳು ಪತ್ರಿಕೆಗಳು ಬೆಳೆಯಬಹುದು. ಪತ್ರಿಕೆಗಳಿಗೆ ಲೇಖನಗಳು ಬರಬಹುದು. ಓದುವವರ ಸಂಖ್ಯೆಯೂ ಅಧಿಕವಾಗಿ ಪತ್ರಿಕೆಗಳು ಬೆಳೆಯಬಹುದು. ಹೀಗಾಗಿ ಪ್ರತಿಯೊಬ್ಬರ ತುಳು ಭಾಷೆಯ ಕುರಿತು ಆಸಕ್ತಿ ವಹಿಸಿ ತೊಡಗಿಸಿಕೊಂಡಾಗ ಮಾತ್ರ ತುಳು ಭಾಷೆ, ಪತ್ರಿಕೆಗಳು ಬೆಳೆಯಲು ಸಾಧ್ಯ ಎಂದರು.
ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳಷ್ಟು ಜವಾಬ್ದಾರಿಯುತ ಸ್ಥಾನದಲ್ಲಿದೆ. ದೇಶದ ಅಭಿವೃದ್ಧಿ, ಆಥಿಕ ಬೆಳವಣಿಗೆಗೆ ಅವುಗಳ ಕಾರ್ಯ ಪ್ರಮುಖವಾಗಿದೆ. ಕಳೆದ ಹಲವು ವರ್ಷಗಳಿಂದ ಪೂವರಿ ಪತ್ರಿಕೆ ಮೂಲಕ ವಿಜಯಕುಮಾರ್ ಅವರು ತುಳುವಿನ ಮಹತ್ವವನ್ನು ತಿಳಿಸುವ ಕಾರ್ಯವನ್ನು ಶ್ಲಾಘಿಸಿದರು. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮವು ಆ.೮ರಂದು ನಡೆಯಲಿದೆ. ಇದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ೫೯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನವು ೩೨ನೇ ಕಾರ್ಯಕ್ರಮವಾಗಿದೆ. ಮೇ.೨ರಂದು ತುಳು ಸಮ್ಮೇಳನವು ಬಹಳಷ್ಟು ಅದ್ದೂರಿಯಾಗಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಸ್ವಾಮಿಜಿಯವರನ್ನು ಗೌರವಿಸುವ ಕಾರ್ಯಕ್ರಮವು ನಡೆಯಲಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ತುಳುವಿನಲ್ಲಿ ಹಲವು ತುಳು ಪತ್ರಿಕೆಗಳು ಮೂಡಿಬಂದಿದೆ. ಅದರ ವಿಚಾರಗಳು ಜನತೆಗೆ ತಿಳಿಯವಬೇಕು. ಅವುಗಳ ಪಟ್ಟ ಕಷ್ಟ ತಿಳಿಯಬೇಕು. ಮುಂದೆ ತುಳು ಪತ್ರಿಕೆಗಳು ಬೆಳೆಯಬೇಕು ಎಂಬ ದೊಡ್ಡ ಉದ್ದೇಶದಿಂದ ಸಮ್ಮೇಲನ ಆಯೋಜಿಸಲಾಗಿದೆ. ಬೆಂಗಳೂರು, ಮುಂಬಯಿಯಲ್ಲಿರುವ ತುಳುವರನ್ನು ಸೇರಿಸಿಕೊಂಡು ರಾಷ್ಟ್ರೀಯ ಸಮ್ಮಿಳನ ನಡೆಸಲಾಗಿದೆ ಎಂದರು.
ಒಡಿಯೂರು ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಾರಂಭದಲ್ಲಿ ನಡೆದ ತುಳು ಭಜನೆಯ ಕಾರ್ಯಕ್ರಮವನ್ನು ನ್ಯಾಯವಾದಿ ಮಹೇಶ್ ಕಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಉಪಸ್ಥಿತರಿದ್ದರು. ನಯನಾ ರೈ ನೆಲ್ಲಿಕಟ್ಟೆಯವರ ನೇತೃತ್ವದ ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಘಟಕ ಹಾಗೂ ವಸಂತಲಕ್ಷ್ಮೀ ನೇತೃತ್ವದ ರಂಗದೀಪ ತಂಡ ಪುತ್ತೂರು ಇವರಿಂದ ತುಳು ಭಜನಾ ಕಾರ್ಯಕ್ರಮ ನಡೆಯಿತು.
ವಿಶೇಷ ಸಂಚಿಕೆ ಬಿಡುಗಡೆ:
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಪೂವರಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ ಬಿಡುಗಡೆ ಮಾಡಿದರು. ತುಳು ಭಾಷೆಯಲ್ಲಿ ಪ್ರಕಟಗೊಂಡಿದ್ದ ಹಲವು ಪತ್ರಿಕೆಗಳ ಪ್ರದರ್ಶನವು ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಗಳಿಗೆ ಸಾಧ್ವಿ ಮಾತಾನಂದಮಯೀಯವರು ಹೂ,ಅಕ್ಕಿ ಕಾಲುಗಳನ್ನು ಹಾಕಿ ಚಾಲನೆ ನೀಡಿದರು.
ಮಲ್ಲಕಾ ಜೆ.ರೈ ಪ್ರಾಥಿಸಿದರು. ಶಿಕ್ಷಕಿ ದೇವಕಿ ಸ್ವಾಗತಿಸಿದರು. ಗಾಯತ್ರಿ ವಿಜಯ ಕುಮಾರ್ ಭಂಡಾರಿ, ಪುರಂದರ ಶೆಟ್ಟಿ, ವಿದ್ಯಾಶ್ರೀ, ಉಳ್ಳಾಲ್, ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಕಲಾವಿದ ಕೃಷ್ಣಪ್ಪ, ಜಯಪ್ರಕಾಶ್ ರೈ ನೂಜಿಬೈಲು ಅತಿಥಿಗಳಿಗೆ ಶಾಲು ಹಾಕಿ, ತಾಂಬೂಲ ನೀಡಿ ಗೌರವಿಸಿದ್ದು, ಪೂವರಿ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಭಂಡಾರಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಗೋಷ್ಠಿ, ಪೂವರಿ ಸಾಹಿತ್ಯ ಪುರಸ್ಕಾರ, ನುಡಿಚಿತ್ರ ಪ್ರದರ್ಶನ ರಸಪ್ರಶ್ನೆ ನಡೆದಿದ್ದು ನಗರ ಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು ವಂದಿಸಿದರು.