
ತುಮಕೂರು, ಸೆ. ೨- ಬ್ರಹ್ಮಶ್ರೀ ನಾರಾಯಣ ಗುರುಗಳು ನಮ್ಮಂತೆ ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಸಹ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸುವ ಮೂಲಕ ತುಳಿತಕ್ಕೊಳಗಾದ ಸಮುದಾಯಗಳ ಆರಾಧ್ಯ ದೈವವಾದರು ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘ, ಶ್ರೀ ನಾರಾಯಣ ಗುರು ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಇಂತಹ ಮಹನೀಯರ ವಿಚಾರಧಾರೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ, ಶ್ರೀ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ಪರಿಚಯಿಸುವ ಸಲುವಾಗಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬರುವ ಅಕ್ಟೋಬರ್ ೭ ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರಮಾಣದ ಜಯಂತ್ಯೋತ್ಸವವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರ್ಯ ಈಡಿಗರ ಜಿಲ್ಲಾಧ್ಯಕ್ಷ ಕೆ.ವಿ. ಅಜಯಕುಮಾರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಅಸ್ಪೃಶ್ಯತೆಯಂತಹ ಕೆಟ್ಟ ಆಚರಣೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಧೀಮಂತರು ಎಂದು ಬಣ್ಣಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಟಿ.ಕೆ. ಧನಿಯಾಕುಮಾರ್ ಮಾತನಾಡಿ, ಆರ್ಯ ಈಡಿಗರ ಸಮಾಜವು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ನಾಡಿನ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಘೋಷಿಸಿ ಆಚರಣೆಗೆ ತಂದಿರುವುದು ಅಭಿನಂದನಾರ್ಹ ಎಂದರು.
ಜಿಲ್ಲಾ ನಾರಾಯಣ ಗುರುಗಳ ಸಮಾಜದ ಅಧ್ಯಕ್ಷ ಮಾಧವನ್ ಮಾತನಾಡಿ, ಶ್ರೀ ನಾರಾಯಣ ಗುರುಗಳು ೧೮೫೬ರ ಆಗಸ್ಟ್ ೨೨ ರಂದು ಕೇರಳದ ತಿರುವನಂತಪುರದ ಚೆಂಪಜಂತಿ ಎಂಬ ಪುಟ್ಟ ಹಳ್ಳಿಯಲ್ಲಿ ಮದನ್ ಆಸನ್ ಹಾಗೂ ಪತ್ನಿ ಕುಟ್ಟಿಯಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಅವರು ರಚಿಸಿದ ಸ್ತೋತ್ರಗಳು ಮತ್ತು ಭಕ್ತಿಗೀತೆಗಳಿಂದ ಸಾಮಾಜಿಕ ಸುಧಾರಣೆ ಕಾಣಲು ಕಾರಣವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಜಂಟಿ ಕಾರ್ಯದರ್ಶಿ ನಾರಾಯಣ್, ಖಜಾಂಚಿ ಲಕ್ಷ್ಮಿನಾರಾಯಣ, ಪದಾಧಿಕಾರಿಗಳಾದ ಪುರುಷೋತ್ತಮ್, ಚಂದ್ರಕಲಾ, ಪ್ರಭಾ ವಸಂತ್, ವಸಂತ್, ರಾಮ ಹನುಮಯ್ಯ, ತೇಜು ವೆಂಕಟಸ್ವಾಮಿ, ಜಿಲ್ಲಾ ನಾರಾಯಣ ಗುರುಗಳ ಸಮಾಜದ ಉಪಾಧ್ಯಕ್ಷ ಮಣಿ, ಕಾರ್ಯದರ್ಶಿ ರಾಜೇಶ್, ಖಜಾಂಚಿ ರಾಜನ್, ರಾಮಚಿನ್ನಯ್ಯ, ವಸಂತರಾಜನ್, ಬೀನಾಬಾಯಿ, ಪ್ರೇಮ ಮಾಧವನ್ ಮತ್ತಿತರರು ಉಪಸ್ಥಿತರಿದ್ದರು.