ತುರ್ತು ಸೇವಾ ವಾಹನಗಳಿಗೆ ಎಸ್‍ಪಿ ಚಾಲನೆ

????????????????????????????????????

ಚಾಮರಾಜನಗರ, ಮೇ. 03- ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯದ ಮಹತ್ವಾಕಾಂಕ್ಷಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ‘112’ ಯೋಜನೆಯಡಿ ಜಿಲ್ಲೆಗೆ ನೀಡಿರುವ ಇ.ಆರ್.ಎಸ್.ಎಸ್ ತುರ್ತು ಸೇವೆಯ ವಾಹನಗಳ ಸೇವೆಗೆ ಚಾಲನೆ ದೊರೆಯಿತು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ದಿವ್ಯಾಸಾರಾ ಥಾಮಸ್ ಅವರು ಹಸಿರು ನಿಶಾನೆ ತೋರುವ ಮೂಲಕ ತುರ್ತು ಸ್ಪಂದನ ವಾಹನಗಳ ಸೇವೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ‘112’ ಸೇವೆಯ ಕುರಿತ ಮಾಹಿತಿ ನೀಡುವ ಪೋಸ್ಟರ್, ಕರಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್ ಬಿಡುಗಡೆ ಮಾಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡಲು ಇಡೀ ದೇಶಾದ್ಯಂತ ‘112’ ಸಂಖ್ಯೆಯೊಂದನ್ನೇ ಬಳಸಲಾಗುತ್ತದೆ. ತುರ್ತು ಕರೆಗಳಾದ 100 (ಪೊಲೀಸ್), 101 (ಅಗ್ನಿಶಾಮಕ ಮತ್ತು ರಕ್ಷಣೆ) ಹಾಗೂ ಇತರೆ ತುರ್ತು ಕರೆ ಸಂಖ್ಯೆಗಳನ್ನು ‘112’ರಲ್ಲಿ ಏಕೀಕೃತಗೊಳಿಸಿದ್ದು, ‘112’ ಕ್ಕೆ ತುರ್ತು ಕರೆ ಮಾಡಿ ಸೇವೆ ಪಡೆಯಬಹುದಾಗಿದೆ ಎಂದರು.
ಅಗ್ನಿ ಅನಾಹುತ, ವಿಪತ್ತು ಸಂದರ್ಭ, ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಜಗಳ, ಅಕ್ರಮ ಮದ್ಯ ಮಾರಾಟ, ಜೂಜಾಟ, ಡ್ರಗ್ಸ್ ಮಾರಾಟ, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಕ್ರಿಕೆಟ್ ಬೆಟ್ಟಿಂಗ್, ಹಿರಿಯ ನಾಗರಿಕರ ರಕ್ಷಣೆ ಮುಂತಾದ ಸಂದರ್ಭಗಳಲ್ಲಿ ಸಾರ್ವಜನಿಕರು ‘112’ ಸಂಖ್ಯೆ ಕರೆ ಮಾಡಿದರೆ ತುರ್ತಾಗಿ ಸ್ಪಂದಿಸಿ ನೆರವಿಗೆ ಧಾವಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದರು.
ಅನಾರೋಗ್ಯ, ವೈದ್ಯಕೀಯ ಸಂದರ್ಭ ಹೊರತುಪಡಿಸಿ ಉಳಿದ ಯಾವುದೇ ವಿಪತ್ತು ಇರಲಿ ಅಥವಾ ರಕ್ಷಣೆ, ನೆರವು ಪಡೆಯುವಂತಹ ತುರ್ತು ಸಂದರ್ಭಗಳಿದ್ದಲ್ಲಿ ಜಿಲ್ಲಾ ಜನತೆ ‘112’ ಕ್ಕೆ ಕರೆ ಮಾಡಬಹುದು. ಮೊದಲಿಗೆ ಕರೆಯು ಬೆಂಗಳೂರಿನಲ್ಲಿರುವ ತುರ್ತು ಪ್ರತಿಕ್ರಿಯೆ ಕೇಂದ್ರಕ್ಕೆ ತಲುಪಲಿದೆ. ಅಲ್ಲಿಂದ ನಮ್ಮ ಜಿಲ್ಲಾ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ‘112’ ಕಂಟ್ರೋಲ್ ರೂಂ ಗೆ ಬರಲಿದ್ದು, ಕೂಡಲೇ ಯಾವ ಭಾಗದಿಂದ ಕರೆ ಬಂದಿರುತ್ತದೆಯೋ ಎಂಬುದನ್ನು ತಿಳಿದು ಘಟನೆಗೆ ಸಂಬಂಧಿಸಿರುವ ಸ್ಥಳಕ್ಕೆ ಅತ್ಯಂತ ತುರ್ತಾಗಿ ಸ್ಪಂದನ ಸಹಾಯ ವ್ಯವಸ್ಥೆಯ ವಾಹನಗಳು ತೆರೆಳಿ ನೆರವಿಗೆ ಮುಂದಾಗಲಿವೆ ಎಂದು ಅವರು ವಿವರಿಸಿದರು.
ತುರ್ತು ಸ್ಪಂದನಾ ವ್ಯವಸ್ಥೆಗಾಗಿ 6 ಹೊಸ ಸ್ಕಾರ್ಪಿಯೋ ವಾಹನಗಳನ್ನು ಜಿಲ್ಲೆಗೆ ನೀಡಲಾಗಿದೆ. ಈಗಾಗಲೇ ಹೆದ್ದಾರಿ ಗಸ್ತು ಕಾರ್ಯಕ್ಕೆ ನಿಯೋಜಿತವಾಗಿರುವ 4 ವಾಹನಗಳನ್ನು ತುರ್ತು ಸ್ಪಂದನ ಸೇವಾ ವ್ಯವಸ್ಥೆಗೆ ಪರಿವರ್ತಿಸಲಾಗಿದೆ. ಒಟ್ಟು 10 ವಾಹನಗಳು ಇನ್ನು ಮುಂದೆ ‘112’ ಕರೆಗಳಿಗೆ ಸ್ಪಂದಿಸಿ ತುರ್ತು ಸೇವೆಯ ಕಾರ್ಯ ನಿರ್ವಹಿಸಲಿವೆ ಎಂದರು.
ತುರ್ತು ಸ್ಪಂದನ ಸೇವೆಗೆ ನಿಯೋಜನೆಗೊಂಡ ಪ್ರತಿ ವಾಹನ 8ರಿಂದ 10 ಕಡೆ ನಿಲ್ಲಲಿದೆ. ಈ ಹಿಂದೆ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗಿರುವ, ದೂರುಗಳು ಹೆಚ್ಚು ದಾಖಲಾಗಿರುವ ಪ್ರದೇಶವ್ಯಾಪ್ತಿಯಲ್ಲಿ ವಾಹನಗಳು ನಿಲುಗಡೆಯಾಗಲಿವೆ. ಪ್ರತಿ 2 ಗಂಟೆಗೊಮ್ಮೆ ನಿಲುಗಡೆ ಸ್ಥಳವನ್ನು ಬದಲಿಸಲಿವೆ. ಯಾವ ಭಾಗದಿಂದ ಹೆಚ್ಚು ನೆರವು, ರಕ್ಷಣೆ ಕೋರಿ ಅಥವಾ ದೂರುಗಳ ಸಂಬಂಧ ಕರೆಗಳು ಕೇಳಿ ಬರುತ್ತದೆಯೋ ಅಂತಹ ಪ್ರದೇಶಗಳಲ್ಲಿಯೂ ತುರ್ತು ಸೇವೆ ವಾಹನಗಳು ನಿಲ್ಲುವ ವ್ಯವಸ್ಥೆಯಾಗಲಿವೆ ಎಂದು ತಿಳಿಸಿದರು.
ದಿನಕ್ಕೆ 3 ಪಾಳಿಯಲ್ಲಿ ವಾಹನಗಳು ಸೇವೆ ನೀಡಲಿದ್ದು, ಸಾರ್ವಜನಿಕರು ಅನಾರೋಗ್ಯ, ವೈದ್ಯಕೀಯ ತುರ್ತು ಸಂದರ್ಭ ಹೊರತುಪಡಿಸಿ ಉಳಿದ 24×7 ಅವಧಿಯಲ್ಲಿ ಯಾವುದೇ ತುರ್ತು ಸಂದರ್ಭ ಎದುರಾದಾಗ ತಪ್ಪದೇ ‘112’ ಸಂಖ್ಯೆಗೆ ಕರೆ ಮಾಡಿ ಸ್ಪಂದನ ಸಹಾಯ ಸೇವೆಯನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದನ್ಣನವರ್, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ನಾಗರಾಜು, ಇನ್ನಿತರ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.