ತುರ್ತು ಸಂದರ್ಭ ಎದುರಿಸಲು ಪ್ರಥಮ ಚಿಕಿತ್ಸೆ ಜ್ಞಾನ ಅಗತ್ಯ

ಚಿತ್ರದುರ್ಗ,ಸೆ.17; ತುರ್ತು ಸಂದರ್ಭ ಎದುರಿಸಲು ಪ್ರಥಮ ಚಿಕಿತ್ಸೆ ಬಗ್ಗೆ ಎಲ್ಲರೂ ಕನಿಷ್ಟ ಮಾಹಿತಿ ಹೊಂದುವುದು ಅಗತ್ಯವಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎನ್.ಸುಹಾಸ್ ಹೇಳಿದರು.
 ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಸರ್ಕಾರಿ ವಿಜ್ಞಾನ ಕಾಲೇಜು ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಂಡಿದ್ದ ವಿಶ್ವ ಪ್ರಥಮ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಥಮ ಚಿಕಿತ್ಸಾ ಕೌಶಲಗಳು ಜೀವನದ ಅವಿಭಾಜ್ಯ ಅಂಗವಾಗಬೇಕು. ಅಪಘಾತ, ಹೃದಯಘಾತ, ಕಾಯಿಲೆ ಹಾಗೂ ತುರ್ತು ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತವೆ. ಹಾಗಾಗಿ ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ತರಬೇತಿ ಪಡೆಯಬೇಕು ಎಂದು ಹೇಳಿದರು.
 ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆಯ ಕಾರ್ಯದರ್ಶಿ ಎನ್. ಮಜಹರ್ ಉಲ್ಲಾ ಮಾತನಾಡಿ, ಪ್ರಥಮ ಚಿಕಿತ್ಸೆ ದಿನಾಚರಣೆಯು ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ಶನಿವಾರದಂದು ಆಚರಿಸಲಾಗುತ್ತಿದೆ. ಜನರಿಗೆ ಅಪಘಾತ, ಕಾಯಿಲೆ ಹಾಗೂ ತುರ್ತು ಅನಾಹುತಗಳಲ್ಲಿ ಬಾಧೆಗೊಂಡಿರುವ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆ ದೊರಕುವುದಕ್ಕಿಂತ ಮುಂಚಿತವಾಗಿ ಆ ಸ್ಥಳದಲ್ಲಿ ಲಭ್ಯವಿರುವ ಸಾಮಾಗ್ರಿಗಳನ್ನು ಬಳಸಿಕೊಂಡು ತಕ್ಷಣದಲ್ಲಿಯೇ ಕೊಡುವ ಚಿಕಿತ್ಸೆಗೆ ಪ್ರಥಮ ಚಿಕಿತ್ಸೆ ಎನ್ನುತ್ತಾರೆ ಎಂದು ಹೇಳಿದರು.
 ವಿಶ್ವದಾದ್ಯಂತ ಪ್ರಥಮ ಚಿಕಿತ್ಸೆಯನ್ನು ಪ್ರಚಾರ ಮಾಡುವುದರಲ್ಲಿ ರೆಡ್ ಕ್ರಾಸ್ ಸಂಸ್ಥೆ ಮುಂಚೂಣಿಯಲ್ಲಿದೆ. ಪ್ರಾಣ ಉಳಿಸುವ ಈ ಪವಿತ್ರ ಪ್ರಥಮ ಚಿಕಿತ್ಸೆಯ ಜ್ಞಾನ ಪ್ರತಿಯೊಬ್ಬ ವ್ಯಕ್ತಿಯ ನೈತಿಕ ಬಾದ್ಯತೆಯಾಗಿದೆ ಎಂದು ಹೇಳಿದರು.
ಹಲವಾರು ಜೀವ ಉಳಿಸಲು ಸಾಧ್ಯವಾಗುವಂತೆ ಮಾಡುವ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ನೀಡಿ ಹಲವಾರು ಜೀವಗಳನ್ನು ಉಳಿಸುವ ವಿಶ್ವಾಸ ಹೊಂದಬೇಕು ಎಂದರು.
 ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್.ಕೆ. ರಂಗಸ್ವಾಮಿ ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಥಮ ಚಿಕಿತ್ಸೆ ದಿನಾಚರಣೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
 ಸಂಪನ್ಮೂಲ ವ್ಯಕ್ತಿಯಾಗಿ ಹೋಂ ಗಾರ್ಡ್ ಜಿಲ್ಲಾ ಬೋಧಕರಾದ ಹೆಚ್.ತಿಪ್ಪೇಸ್ವಾಮಿ ಅವರು ಪ್ರಥಮ ಚಿಕಿತ್ಸೆ ತರಬೇತಿ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್‍ಗಳನ್ನು ವಿತರಿಸಲಾಯಿತು.
 ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆಯ ಖಜಾಂಚಿ ಅರುಣ್ ಕುಮಾರ್, ಸರ್ಕಾರಿ ವಿಜ್ಞಾನ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ.ರಮೇಶ ಹೆಚ್.ರಟಗೇರಿ, ಯುವ ರೆಡ್ ಕ್ರಾಸ್ ಘಟಕ ಸಂಚಾಲಕರಾದ ಸರ್ದಾರ್ ಹುಸೇನ್, ಹೋಂಗಾರ್ಡ್ ಸಹಾಯಕ ಬೋಧಕರಾದ ನಾಗರಾಜ್, ವಿ.ಶ್ರೀನಿವಾಸ್ ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪ್ರಥಮ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಕೆ.ರಂಗಸ್ವಾಮಿ ಉದ್ಘಾಟಿಸಿದರು. ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎನ್.ಸುಹಾಸ್ ಇದ್ದಾರೆ.Attachments area