ತುರ್ತು ಪ್ರಕರಣ ವಿಚಾರಣೆ ಹೈಕೋರ್ಟ್ ನಿರ್ಧಾರ

ಬೆಂಗಳೂರು, ಜು. ೧- ರಾಜ್ಯ ಸೇರಿದಂತೆ ರಾಜಧಾನಿಯಲ್ಲಿ ಕೊರೊನಾ ಸೋಂಕು, ಸಾವು ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ತುರ್ತು ಪ್ರಕರಣಗಳನ್ನು ಮಾತ್ರ ವಿಡಿಯೋ ಸಂವಾದದ ಮೂಲಕ ವಿಚಾರಣೆ ನಡೆಸಲು ಹೈಕೋರ್ಟ್ ನಿರ್ಧರಿಸಿದೆ.
ಹೈಕೋರ್ಟ್‌ಗೂ ಕೊರೊನಾ ಬಿಸಿ ತಟ್ಟಿರುವ ಹಿನ್ನೆಲೆ ನಿನ್ನೆಯಷ್ಟೇ ನ್ಯಾಯಾಲಯ ಕಲಾಪವನ್ನು ಸ್ಥಗಿತಗೊಳಿಸಿ, ಹೈಕೋರ್ಟ್ ಕಟ್ಟಡಕ್ಕೆ ಸ್ಯಾನಿಟೈಸರ್ ಸಿಂಪಡಿಸಲಾಗಿತ್ತು. ಆ ನಂತರ ಮುಂದಿನ ಆದೇಶದವರೆಗೂ ತುರ್ತು ಪ್ರಕರಣಗಳನ್ನು ಮಾತ್ರ ವಿಡಿಯೋ ಸಂವಾದದ ಮೂಲಕ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ಸ್ಪಷ್ಟ ಪಡಿಸಿದ್ದಾರೆ. ಹಾಗೂ ಕೊರೊನಾ ಮಹಾಮಾರಿ ಆತಂಕದ ನಡುವೆ ಕೋರ್ಟಿನ ಕಲಾಪಗಳಲ್ಲಿ ಇನ್ನು ಮುಂದೆ ಬದಲಾವಣೆಯನ್ನು ತರಲು ಉದ್ದೇಶಿಸಿದ್ದಾರೆ. ಈ ಮಧ್ಯೆ ಧಾರಾವಾಡ ಹಾಗೂ ಕಲ್ಬುರ್ಗಿ ಹೈಕೋರ್ಟ್ ಪೀಠಗಳಲ್ಲಿ ಎಂದಿನಂತೆ ನ್ಯಾಯಾಲಯ ಕಲಾಪ ಮುಂದುವರಿಯಲಿದೆ. ಕೊರೊನಾ ಭೀತಿಯಿಂದಾಗಿ ಕೈಗೊಂಡಿರುವ ಕ್ರಮಗಳ ಕಟ್ಟುನಿಟ್ಟು ಜಾರಿ ಹಾಗೂ ಪಾಲನೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಹೈಕೋರ್ಟಿನಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಸೇರಿದಂತೆ ಇನ್ನಿತರ ಅವಶ್ಯಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಹಾಗೂ ಆನ್ ಲೈನ್‌ನಲ್ಲಿ ಕಲಾಪಗಳು ಹೆಚ್ಚು ಸುರಕ್ಷಿತಾ ಎನ್ನುವ ಅಭಿಪ್ರಾಯಕ್ಕೆ ಮುಖ್ಯ ನ್ಯಾಯಮೂರ್ತಿ ಬಂದಿದ್ದಾರೆ.