ತುರ್ತು ಪೊಲೀಸ್ ವಾಹನ 112 ಸಹಾಯವಾಣಿಗೆ ಸಚಿವರಿಂದ ಚಾಲನೆ

ಬಳ್ಳಾರಿ,ಮೇ 1: ಪೊಲೀಸ್ ಇಲಾಖೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಜಿಲ್ಲೆಯ ಪೊಲೀಸರಿಗೆ ಈ ತುರ್ತು ವಾಹನಗಳು ಮತ್ತಷ್ಟು ಬಲ ತುಂಬುತ್ತವೆ. ಸಾರ್ವಜನಿಕರು ಸಹಾಯವಾಣಿಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ಅವರು ಇಂದುಬ ಜಿಲ್ಲಾ ಪೊಲೀಸ್ ನಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್,ಅಗ್ನಿ,ವಿಪತ್ತುಗೆ ಸಂಬಂಧಿಸಿದ ತುರ್ತುಪರಿಸ್ಥಿತಿಯಲ್ಲಿ ಇಆರ್ ಎಸ್ ಎಸ್ ಸಹಾಯವಾಣಿ 112 ಕ್ಕೆ ಚಾಲನೆ ಮತ್ತು 19 ಇಆರ್ ಎಸ್ ಎಸ್ ವಾಹನಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಾರ್ವಜನಿಕರ ನೆರವಿಗೆ ನಿಲ್ಲಲು ಕೇಂದ್ರ ಸರ್ಕಾರ ರೂಪಿಸಿದ ಒಂದು ಅದ್ಭುತ ಯೋಜನೆ ಇದಾಗಿದೆ‌. ಸಾರ್ವಜನಿಕರು ಅಕ್ರಮ ಚಟುವಟಿಕೆಗಳ ಮುಕ್ತವಾಗಿ ಬದುಕು ಸಾಗಿಸಲು ಸಹಾಯವಾಣಿ ಮತ್ತು ವಾಹನಗಳ ಮೂಲಕ ಪೊಲೀಸ್ ಇಲಾಖೆ ನೆರವಿಗೆ ಬರಲಿದೆ ಎಂದರು.
ದೇಶದಲ್ಲಿ ನಡೆಯುವ ಕ್ರೈಂ ತಡೆಯುವ ಉದ್ದೇಶದಿಂದ ಈ ಸಹಾಯವಾಣಿಯನ್ನು ಶುರು ಮಾಡಲಾಗಿದೆ. ಬಳ್ಳಾರಿ ಜನರಿಗೆ ಯಾವುದೇ ರೀತಿಯ ತೊಂದರೆಯಾದರೆ ತಕ್ಷಣ ಸ್ಪಂದಿಸುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತದೆ. ಈ ವಾಹನಗಳು ಬಳ್ಳಾರಿ ಜಿಲ್ಲೆಯಲ್ಲಿ ಮುಂದೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯುವ ಕೆಲಸ ಮಾಡುತ್ತವೆ‌ ಎಂದರು.
ಎಸ್ಪಿ ಸೈದುಲು ಅಡಾವತ್ ಅವರು ಮಾತನಾಡಿ,ಒಳ್ಳೆಯ ಉದ್ದೇಶದಿಂದ ಈ ವಾಹನ ನೀಡಲಾಗಿದೆ. ಜನಸಂಖ್ಯೆ ಜಾಸ್ತಿ ಮತ್ತು ಹೆಚ್ಚಿನ ಪೊಲೀಸ್ ಸ್ಟೇಷನ್ ಹೆಚ್ಚು ಇರುವುದರಿಂದ ರಾಜ್ಯದಲ್ಲಿಯೇ ಬಳ್ಳಾರಿಗೆ ಹೆಚ್ಚಿನ ವಾಹನ ನೀಡಲಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ.112 ನಂಬರ್ ಗೆ ಯಾವುದೇ ಫೋನ್ ಕಾಲ್ ಬಂದ 15 ಸೆಕೆಂಡನೊಳಗೆ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆಂದರು.
ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ
ತುರ್ತಾಗಿ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ವೇಗವಾಗಿ ವಾಹನ ಓಡಿಸಬೇಡಿ ಮತ್ತು ತಮ್ಮ ಇತಿಮಿತಿಯಲ್ಲಿಯೇ ಓಡಿಸಿ ಎಂದು ಸಲಹೆ ನೀಡಿದರು.
ಎಎಸ್ಪಿ ಲಾವಣ್ಯ ಮಾತನಾಡಿ ಒಂದು ಆ್ಯಪ್ ಮೂಲಕ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಯಾವುದೇ ಒಬ್ಬ ವ್ಯಕ್ತಿ ಕರೆ ಮಾಡಿದ ತಕ್ಷಣ ಆ ವಾಹನದಲ್ಲಿರುವ ಪೊಲೀಸ್ ಅಧಿಕಾರಿ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ದಿನದ 24 ಗಂಟೆಯೂ ಇದು ಕೆಲಸ ಮಾಡುತ್ತದೆ ಜನರು ಇದರಿಂದ ಸದುಪಯೋಗ ಪಡಿಸಿಕೊಳ್ಳಿ ಎಂದರು.