ತುರ್ತು ಕರೆ ೧೧೨ ಬಳಕೆಗೆ ಡಿವೈಎಸ್‌ಪಿ ಸಲಹೆ

ಆನೇಕಲ್, ನ.೧೪-ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ ೧೧೨ ಸಹಾಯವಾಣಿ ಪ್ರಾರಂಭವಾಗಿದೆ. ಇನ್ನು ಮುಂದೆ ಸಾರ್ವಜನಿಕರು ತುರ್ತು ಕರೆ ಮಾಡಿ ವೈದ್ಯಕೀಯ, ಪೊಲೀಸ್, ಆಂಬುಲೆನ್ಸ್, ಅಗ್ನಿಶಾಮಕ ನೆರವು ಪಡೆಯಲು ಮೇಲಿನ ಸಂಖ್ಯೆಗೆ ಕರೆ ಮಾಡಬೇಕು ಎಂದು ಡಿವೈಎಸ್ಪಿ ಮಹದೇವಪ್ಪ ರವರು ಹೇಳಿದರು.
ಅವರು ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕೆ ಪ್ರದೇಶದಲ್ಲಿ ಹೆಬ್ಬಗೋಡಿ ಪೋಲಿಸ್ ಠಾಣೆ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೧೨ ಸಹಾಯವಾಣಿ ಸಂಖ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆರಂಭಿಕ ಹಂತದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿ, ಅಪರಾಧಗಳನ್ನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ. ಒಂದು ವಾಹನದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಇರುತ್ತಾರೆ ಎಲ್ಲ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವರು ಎಂದರು.
ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಲು, ಆಸ್ತಿ ಪಾಸ್ತಿ, ತಮ್ಮ ರಕ್ಷಣೆ, ಆರೋಗ್ಯ, ಪ್ರಾಣ ಹಾನಿ, ಅಪಘಾತ ಸೇರಿದಂತೆ ಯಾವುದೇ ಸಮಸ್ಯೆಗೆ ತಕ್ಷಣ ಪೊಲೀಸ್ ಸಹಾಯ ಬೇಕಿದ್ದಲ್ಲಿ ೧೧೨ ಸಂಖ್ಯೆಗೆ ಕರೆ ಮಾಡಬಹುದು ಎಂದರು.
ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್ ಮಾತನಾಡಿ ೧೧೨ ಸಹಾಯವಾಣಿ ಸಂಖ್ಯೆ ದಿನದ ೨೪ ಗಂಟೆಗಳ ಕಾಲ ಸಾರ್ವಜನಿಕರ ಸಹಾಯವಾಣಿ ಯಾಗಿದೆ ನಿಮ್ಮ ಸುತ್ತಮುತ್ತಲಿನ ಗಲಾಟೆ ಗಲಭೆಗಳು ನಡೆದರು, ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಗಳನ್ನು ತಡೆಹಿಡಿಯಲು ಸರ್ಕಾರವು ನೂತನವಾಗಿ ಆಯೋಜಿಸಿದ್ದ ೧೧೨ ಸಹಾಯವಾಣಿ ಸಂಖ್ಯೆಯ ಬಗ್ಗೆ ತಾಲ್ಲೂಕಿನ ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಮಾಡಬೇಕಿದೆ ಎಂದರು. ಪೋಲಿಸ್ ಇಲಾಖೆ ರೂಪಿಸುವ ಕಾರ್ಯಕ್ರಮಗಳಿಗೆ ಬೊಮ್ಮಸಂದ್ರ ಕೈಗಾರಿಕಾ ಸಂಘವು ಯಾವಾಗಲೂ ಕೈಜೋಡಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಬ್ಬಗೋಡಿ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಗೌತಮ್ ಸೇರಿದಂತೆ ಬೊಮ್ಮಸಂದ್ರ ಕೈಗಾರಿಕಾ ಸಂಘದ ಪದಾದಿಕಾರಿಗಳು ಮತ್ತು ಕಾರ್ಮಿಕರು ಜಾಗೃತಿ ಕಾರ್ಯಕ್ರಮದಲ್ಲಿ ಇದ್ದರು.